ಲೋಕಬಂಧು ನ್ಯೂಸ್ ಉಜಿರೆ, ಏ.30
ರಂಗಭೂಮಿಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಧರ್ಮಸ್ಥಳದಲ್ಲಿ ಗುರುವಾರ ಘಟಿಸಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ರಂಗಶಿವ ಕಲಾ ಬಳಗ ವತಿಯಿಂದ ಆಯೋಜಿಸಲಾದ ಪ್ರಸಕ್ತ ಸಾಲಿನ 'ನಲಿಯೋಣ ಬಾ' ರಂಗ ಶಿಬಿರದಲ್ಲಿ ಮೊದಲ ಬಾರಿಗೆ ಎಐ ರೋಬೋಟ್ ‘ಶೃತಿ’ ರಂಗಮಂಚದಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.ಹೇಮಾವತಿ ವೀ. ಹೆಗ್ಗಡೆ ಅವರ ಪರಿಕಲ್ಪನೆ ಮತ್ತು ಮಾರ್ಗದರ್ಶನದಲ್ಲಿ ನಡೆದ ರಂಗ ಶಿಬಿರದ ಸಮಾರೋಪ ಸಮಾರಂಭ ವಸಂತ ಮಹಲ್‌ನಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.
9 ದಿನಗಳ ಕಾಲ ನಡೆದ ಶಿಬಿರವನ್ನು ರಂಗ ನಿರ್ದೇಶಕ ಸುನಿಲ್ ಶೆಟ್ಟಿ ಕಲ್ಕೊಪ್ಪ ನೇತೃತ್ವದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಹೇಮಾವತಿ ವೀ. ಹೆಗ್ಗಡೆ ಅವರ ರಚನೆಯ 'ಹೂವಿಯ ಕನಸು' ಮಕ್ಕಳ ನಾಟಕ ಪ್ರದರ್ಶಿಸಲಾಯಿತು.
ನಾಟಕದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಮಾತ್ರವಲ್ಲದೆ ಏಐ ರೋಬೋಟ್ ‘ಶೃತಿ’ ಕೂಡಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವುದು ವಿಶೇಷ.
ನಾಟಕ ‘ಹೂವಿ’ ಎಂಬ ಪುಟ್ಟ ಹುಡುಗಿಯ ಕನಸಿನ ಲೋಕದ ಸುತ್ತ ಹೆಣೆಯಲ್ಪಟ್ಟಿದೆ. ಹೂವಿಯ ಕನಸಿನಲ್ಲಿ ಕಾಣಿಸಿಕೊಳ್ಳುವ ರೋಬೋಟ್ ‘ಶೃತಿ’, ಕಥೆಯನ್ನೇ ಮುಂದಕ್ಕೆ ಕೊಂಡೊಯ್ಯುವ ಮುಖ್ಯ ಪಾತ್ರ ವಹಿಸಿದೆ.
ವೈದ್ಯರ ದುರಾಸೆಯಿಂದ ಹುಟ್ಟುವ ಸುಳ್ಳು ರೋಗ, ಜನರ ಮೋಸ ಹಾಗೂ ಅದರ ವಿರುದ್ಧ ಹೂವಿಯ ಚಾಣಾಕ್ಷತನದಿಂದ ಸತ್ಯ ಹೊರಬರುವ ಕಥಾ ಹಂದರ ಪ್ರೇಕ್ಷಕರ ಮನ ಸೆಳೆಯಿತು.
ನಾಟಕದ ಕೊನೆಯಲ್ಲಿ ನಿಜವಾದ ರೋಬೋಟ್ ‘ಶೃತಿ’ ರಂಗಮಂಚದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಅಚ್ಚರಿ ಮತ್ತು ಸಂತೋಷವನ್ನುಂಟು ಮಾಡಿತು.
ರಂಗಭೂಮಿಗೆ ತಂತ್ರಜ್ಞಾನವನ್ನು ಪರಿಚಯಿಸುವ ಈ ಪ್ರಯತ್ನಕ್ಕೆ ರಂಗಶಿವ ಕಲಾಬಳಗ ಪ್ರಶಂಸೆಗೆ ಪಾತ್ರವಾಗಿದೆ.
ಅಧುನಿಕತೆಯ ನಡುವೆ ಮಕ್ಕಳನ್ನು ಮತ್ತೆ ರಂಗಭೂಮಿಯತ್ತ ಸೆಳೆಯುವ ಉದ್ದೇಶದಿಂದ ಶಿಬಿರವನ್ನು ಉಚಿತವಾಗಿ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳ ಅಭಿನಯವೂ ಅತ್ಯಂತ ಮನೋಜ್ಞವಾಗಿತ್ತು.
ಈ ಸಂದರ್ಭದಲ್ಲಿ ಹೆಗ್ಗಡೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದು ಮಕ್ಕಳನ್ನು ಅಭಿನಂದಿಸಿದರು.
ತಾಂತ್ರಿಕ ವಿಭಾಗದಲ್ಲಿ ಯಶವಂತ್ ಬೆಳ್ತಂಗಡಿ ಮತ್ತು ಸಂದೇಶ್ ಸಹಕರಿಸಿದ್ದು, ಪ್ರಸಾಧನ ಮತ್ತು ಬೆಳಕಿನ ನಿರ್ವಹಣೆಯನ್ನು ಎಸ್.ಡಿ.ಎಂ. ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ನಿರ್ವಹಿಸಿದರು.
ಇಡೀ ಶಿಬಿರದ ನಿರ್ವಹಣೆಯನ್ನು ರಂಗಶಿವ ಕಲಾಬಳಗದ ಅಧ್ಯಕ್ಷ ರಾಜೇಂದ್ರ ದಾಸ್, ಸದಸ್ಯರಾದ ಕೃಷ್ಣ ರಾವ್, ಅಭಿಷೇಕ್ ರಾವ್, ಜಗದೀಶ್, ಸುಬ್ರಹ್ಮಣ್ಯ, ಪದ್ಮರೇಖಾ, ಡಾ.ಅನನ್ಯ ಜೈನ್, ಶೋಧನ್ ಜೈನ್ ನೇತೃತ್ವದಲ್ಲಿ ರಂಗಶಿವದ ಸದಸ್ಯರು ಪಾಲ್ಗೊಂಡಿದ್ದರು.
ರAಗಭೂಮಿಯೊಂದಿಗೆ ತಂತ್ರಜ್ಞಾನ ಸಂಯೋಜನೆಯ ಈ ಪ್ರಯೋಗ ಭವಿಷ್ಯದ ರಂಗಕಲೆಗೆ ಹೊಸ ದಿಕ್ಕನ್ನು ತೋರಿಸಿದೆ.