ಮಹಿಳಾ ಸಬಲೀಕರಣ ಸಮಾಜದ ಪ್ರಗತಿಗೆ ದಾರಿ

ಲೋಕಬಂಧು ನ್ಯೂಸ್ ಪಡುಬಿದ್ರಿ
ಮಹಿಳಾ ಸಬಲೀಕರಣವೇ ಸಮಾಜದ ಪ್ರಗತಿಗೆ ದಾರಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದರು.ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದಲ್ಲಿ ನಾಡೋಜ ಡಾ.ಜಿ.ಶಂಕರ್ ನೇತೃತ್ವದಲ್ಲಿ ನಡೆಯುತ್ತಿರುವ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ ಕಾರ್ಯಕ್ರಮದಲ್ಲಿ ಗುರುವಾರ ಭಾಗವಹಿಸಿ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಮಹಿಳಾ ದಸರಾಕ್ಕೆ ಚಾಲನೆ ನೀಡಿ‌ ಮಾತನಾಡಿದರು.ತುಳು ಭಾಷೆಗೆ ದ್ವಿತೀಯ ಆಡಳಿತ ಭಾಷೆಯ ಸ್ಥಾನಮಾನ ನೀಡಿದ ಹಿನ್ನೆಲೆಯಲ್ಲಿ ಏರ್ಪಡಿಸಲಾದ ವಿಶೇಷ ಸನ್ಮಾನ ಸ್ವೀಕರಿಸಿ, ತುಳುವಿನಲ್ಲೇ ಮಾತು ಆರಂಭಿಸಿದ ಸಿಎಂ ಡಿಕೆಶಿ, ಕರಾವಳಿ ಪ್ರದೇಶವನ್ನು ವಿಶ್ವ ಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದರೊಂದಿಗೆ ಕರಾವಳಿ ಮತ್ತು ಮಲೆನಾಡಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲಾಗುವುದು ಎಂದರು.ಉಪಮುಖ್ಯಮಂತ್ರಿಯಾಗಿದ್ದಾಗ ದೇವಿಯ ಆಶೀರ್ವಾದ ಪಡೆದಿದ್ದೆ. ಈಗ ಮುಖ್ಯಮಂತ್ರಿಯಾಗಿ ಪ್ರಜಾಸೇವಕನಾಗಿ ದೇವಿಯ ದರ್ಶನ ಪಡೆದಿರುವುದು ನನ್ನ ಭಾಗ್ಯ ಎಂದ ಅವರು, ಮಹಾಲಕ್ಷ್ಮಿ ಸಂಪತ್ತಿನ ಸಂಕೇತವಾದರೆ, ಸರಸ್ವತಿ ಜ್ಞಾನದ ಸಂಕೇತ, ಮಹಾಕಾಳಿ ಶಕ್ತಿಯ ಸಂಕೇತ ಎಂದು ವಿಶ್ಲೇಷಿಸಿದರು.ಮೀನುಗಾರ ಮಹಿಳೆಯರು ಬಡ್ಡಿ ರಹಿತ ಸಾಲದ ಸೌಲಭ್ಯ ಹಾಗೂ ಬಂದರು ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸದ್ಯ ಯಾವುದೇ ಘೋಷಣೆ ಮಾಡುವುದಿಲ್ಲ. ಬೆಂಗಳೂರಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕರಾವಳಿಯ ಚಿನ್ನ ಮತ್ತು ಮರದ ಕೆತ್ತನೆ ಕಲೆಯನ್ನು ಉಳಿಸಿ ಉದ್ಯೋಗಾವಕಾಶ ಸೃಷ್ಟಿಸಲು ಕಾರ್ಕಳದಲ್ಲಿ ಪಾರ್ಕ್ ನಿರ್ಮಾಣದ ಕುರಿತು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.



ದೇವಳ ಪ್ರವಾಸೋದ್ಯಮ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಲಿದೆ. ಯುವಕರ ವಲಸೆ ತಡೆಯುವುದು ಹಾಗೂ ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸುವುದು ಸರ್ಕಾರದ ಉದ್ದೇಶ ಎಂದರು.


ದಸರಾ ಕೇವಲ ಹಬ್ಬವಲ್ಲ, ಅದು ಆರ್ಥಿಕತೆಯ ಚಕ್ರ. ಜಾತಿ- ಧರ್ಮಗಳ ಭೇದ ಮರೆತು ಮಾನವೀಯತೆಗೆ ಆದ್ಯತೆ ನೀಡಬೇಕು. ರಾಜ್ಯದ ಅಭಿವೃದ್ಧಿಗೆ ಜನರ ಆಶೀರ್ವಾದ ಮತ್ತು ಸಹಕಾರ ಅಗತ್ಯ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.


ಮಂಗಳೂರು ವಿಮಾನ ನಿಲ್ದಾಣದಿಂದ ಆಗಮಿಸಿದ ಮುಖ್ಯಮಂತ್ರಿಗೆ ಚಂಡೆ, ಡೋಲು, ಹುಲಿವೇಷ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಭವ್ಯ ಸ್ವಾಗತ ಕೋರಲಾಯಿತು. ಶಾರದಾಮಾತೆ ಪ್ರತಿಮೆಗೆ ಪೂಜೆ ಸಲ್ಲಿಸಿದರು ಹಾಗೂ ಮೊಗವೀರ ಸಮಾಜದ ಕುಲಗುರು ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.


ದೇವಾಲಯದ ವಸ್ತುಪ್ರದರ್ಶನ ಆವರಣದಲ್ಲಿ ವಿವಿಧ ಧಾನ್ಯಗಳಿಂದ ರಚಿಸಿದ ತಮ್ಮದೇ ಕಲಾಕೃತಿಯನ್ನು ಅನಾವರಣಗೊಳಿಸಿದರು.


ಸಚಿವರಾದ ಯು.ಟಿ. ಖಾದರ್ ಮತ್ತು ರಿಜ್ವಾನ್ ಅರ್ಷದ್, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದ ಮಂಕಾಳ್ ವೈದ್ಯ, ಯಶಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಮತ್ತು ಐವನ್ ಡಿ'ಸೋಜಾ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಮಾಜಿ ಶಾಸಕರಾದ ಲಾಲಾಜಿ ಮೆಂಡನ್ ಮತ್ತು ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸುವರ್ಣ, ಉಡುಪಿ- ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮೋಹನ್ ಬೇಂಗ್ರೆ, ದಿನೇಶ್ ಎರ್ಮಾಳು, ಮನೋಜ್ ಕಾಂಚನ್, ಸತೀಶ್ ಕುಂದರ್ ಮಲ್ಪೆ, ವಾಸುದೇವ ಸಾಲ್ಯಾನ್, ಗುಂಡು ಬಿ. ಅಮೀನ್, ರತ್ನಾಕರ ಸಾಲ್ಯಾನ್ ಮಲ್ಪೆ, ವಿಶ್ವಾಸ್ ಅಮೀನ್, ಸಂಧ್ಯಾದೀಪ ಸುನಿಲ್, ಕವಿತಾ ಶರತ್ ದೇವಳದ ಪ್ರಬಂಧಕ ಸತೀಶ ಅಮೀನ್ ಪಡುಕೆರೆ ಮೊದಲಾದವರಿದ್ದರು.


ಉಚ್ಚಿಲ ದಸರಾ ರೂವಾರಿ ನಾಡೋಜ ಡಾ.ಜಿ.ಶಂಕರ್ ಪ್ರಸ್ತಾವನೆಗೈದರು. ದ.ಕ.‌ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ ಸ್ವಾಗತಿಸಿದರು. ಬಾರ್ಕೂರು ದಾಮೋದರ ಶರ್ಮ ನಿರೂಪಿಸಿದರು.