ಲೋಕಬಂಧು ನ್ಯೂಸ್ ಕಟೀಲು
ಕಲಾಮಾತೆ ಕಟೀಲು ದುರ್ಗೆಯ ಸನ್ನಿಧಿಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಕಲಾವಿದರ ಸಂಖ್ಯೆ ಹೆಚ್ಚುತ್ತಿರುವುದು ಸಂತಸದ ಸಂಗತಿ. ನಮ್ಮ ಸಂಸ್ಕೃತಿ ಬಗ್ಗೆ ಯುವ ಸಮುದಾಯ ಹೆಚ್ಚು ಆಸಕ್ತಿ ವಹಿಸಿ ತೊಡಗಿಕೊಳ್ಳುತ್ತಿರುವುದು ಇದರಿಂದ
ಗೊತ್ತಾಗುತ್ತದೆ ಎಂದು ಉದ್ಯಮಿ ರಾಮಪ್ರಕಾಶ ಹೊಳ್ಳ ಹೇಳಿದರು.ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ನವರಾತ್ರಿಯಲ್ಲಿ ಸಂದರ್ಭದಲ್ಲಿ ಸರಸ್ವತಿ ಸದನ ಹಾಗೂ ಕಲಾಮಂಟಪ ವೇದಿಕೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಅರ್ಚಕ ಶ್ರೀಹರಿನಾರಾಯಣದಾಸ ಅಸ್ರಣ್ಣ ಮಾತನಾಡಿ, ಕಟೀಲು ದುರ್ಗೆ ಕಲಾಪ್ರಿಯೆ. ಪ್ರತೀ ಭಾನುವಾರ ಮತ್ತು ಶುಕ್ರವಾರ ದೇಗುಲದಲ್ಲಿ ನೃತ್ಯ ಸಂಗೀತಗಳಿಗೆ ಅವಕಾಶ ನೀಡಲಾಗಿದ್ದು ಇಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ನವರಾತ್ರಿ ದಿನಗಳಲ್ಲೂ ಒಂದು ವೇದಿಕೆ ಸಾಕಾಗದೆ ಎರಡನೇ ವೇದಿಕೆಯಲ್ಲೂ ಕಲಾವಿದರಿಗೆ ಅವಕಾಶ ನೀಡಲಾಗಿದೆ
ಎಂದರು
ನಿವೃತ್ತ ಶಿಕ್ಷಕ ಕೇಶವ ಹೊಳ್ಳ, ಕೆ.ಎನ್. ಪರಮೇಶ್ವರಯ್ಯ, ಸಾಯಿನಾರಾಯಣ ಕಲ್ಮಡ್ಕ, ಜ್ಯೋತಿ ಉಡುಪ ಮೊದಲಾದವರಿದ್ದರು.ಸಂಗೀತ, ಭರತನಾಟ್ಯ, ತಾಳಮದ್ದಲೆ, ಯಕ್ಷಗಾನ ಕಾರ್ಯಕ್ರಮಗಳು ನಡೆದವು.
ನವರಾತ್ರಿಯ ಮೊದಲ ದಿನ ಬೆಳಿಗ್ಗೆ ಪುನರೂರು ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಪಾದಯಾತ್ರೆಯಲ್ಲಿ ಕಟೀಲಿಗೆ ಆಗಮಿಸಿದ್ದರು. 20 ಸಾವಿರಕ್ಕೂ ಹೆಚ್ಚು ಮಂದಿ ದೇಗುಲಕ್ಕೆ ಭೇಟಿ ನೀಡಿದರು.