ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಅಪ್ರತಿಮ ಸಾಧನೆ

ಲೋಕಬಂದು ನ್ಯೂಸ್ | ಉಡುಪಿ, ಏ.5
ಬಾಹ್ಯಾಕಾಶ ಕ್ಷೇತ್ರದಲ್ಲಿ ಕಳೆದ ಐದು ದಶಕಗಳಲ್ಲಿ ಭಾರತ ಜಗತ್ತೇ ನಿಬ್ಬೆರಗಾಗುವ ಸಾಧನೆ ಮಾಡಿದೆ. ಅವುಗಳಲ್ಲಿ ಇತ್ತೀಚಿನ ಅಮೆರಿಕನ್ ಕಂಪೆನಿಯ 80 ಉಪಗ್ರಹಗಳೂ ಸೇರಿದಂತೆ ಏಕಕಾಲದಲ್ಲಿ 104 ಉಪಗ್ರಹಗಳ ಉಡಾವಣೆ ದಾಖಲೆ ಎಂದು ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾಲಯದ ನಿರ್ದೇಶಕ ಹಾಗೂ ಇಸ್ರೋದ ನಿವೃತ್ತ ಅಂತರಿಕ್ಷ ವಿಜ್ಞಾನಿ ಡಾ.ಬಿ.ಆರ್. ಗುರುಪ್ರಸಾದ್ ಹೇಳಿದರು.
ಇಲ್ಲಿನ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಮತ್ತು ಕಾಲೇಜಿನ ವಿಜ್ಞಾನ ಸಂಘದ ಆಶ್ರಯದಲ್ಲಿ ಪೂರ್ಣಪ್ರಜ್ಞ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಹಾಗೂ ವಿಜ್ಞಾನಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ವಿಷಯವಾಗಿ ಅವರು ಮಾತನಾಡಿದರು.


ಮುಂಬೈಯ ವಿಕ್ರಮ್ ಸಾರಾಭಾಯಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಜನಕ ಎಂದೆಸಿದರೆ, ಪ್ರೊ.ಯು.ಆರ್. ರಾವ್ ಭಾರತೀಯ ಉಪಗ್ರಹ ಕಾರ್ಯಕ್ರಮಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಅವರಿಬ್ಬರ ಭದ್ರ ಬುನಾದಿಯಿಂದ ಭಾರತದ ಬಾಹ್ಯಾಕಾಶ ಕ್ಷೇತ್ರವಿಂದು ಸುಭದ್ರವಾಗಿದೆ ಎಂದವರು ವಿವರಿಸಿದರು.


ಉಪಗ್ರಹಗಳು ಭಾರತೀಯ ಆರ್ಥಿಕತೆಯ ಬೆನ್ನೆಲುಬು. ಚಂದ್ರಯಾನ 3.67 ಕೋಟಿ ಕಿ.ಮೀ. ಕ್ರಮಿಸಿದೆ. ಚಂದ್ರಯಾನ 2 ಈಗಲೂ ಸಕ್ರಿಯವಾಗಿದೆ. ಆದಿತ್ಯ ಎಲ್ 1 ಸೂರ್ಯನ ಅಧ್ಯಯನ ನಿರತವಾಗಿದ್ದು ಗಗನ ಯಾನ ಯಶಸ್ವಿಯಾಗಿದೆ. 2040ರಲ್ಲಿ ಮಾನವ ಸಹಿತವಾಗಿ ಚಂದ್ರನಲ್ಲಿ ಕಾಲೂರುವ ಗುರಿಯನ್ನು ಇಸ್ರೋ ಹೊಂದಿದೆ ಎಂದರು.


ಬೆಂಗಳೂರಿನ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಪ್ರಯೋಗಾಲಯ (ಡಿಆರ್.ಎಲ್) ನಿವೃತ್ತ ನಿರ್ದೇಶಕ, ಪದ್ಮಶ್ರೀ ಡಾ.ಪ್ರಹ್ಲಾದ ರಾಮ ರಾವ್ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದ ವೇಳೆ ದೇಶದ 'ಮಿಸೈಲ್ ಮ್ಯಾನ್' ಎನಿಸಿದ ಮಾಜಿ ರಾಷ್ಟ್ರಪತಿ ದಿ.ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರೊಂದಿಗೆ ಕೆಲಸ ಮಾಡಿದ ಅನುಭವ ಹಂಚಿಕೊಂಡರು.


ಉಡುಪಿ ಅದಮಾರು ಮಠ ಶಿಕ್ಷಣ ಕೌನ್ಸಿಲ್ ಗೌರವ ಕಾರ್ಯದರ್ಶಿ ಡಾ.ಎ.ಪಿ.ಭಟ್, ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ.ರಾಮು ಉಪಸ್ಥಿತರಿದ್ದರು. ಪ್ರತೀಕ್ಷಾ ನಿರೂಪಿಸಿದರು.


ಸಮ್ಮೇಳನವನ್ನು ಬೆಂಗಳೂರು ಜಕ್ಕೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್'ಡ್ ಸೈಂಟಿಫಿಕ್ ರಿಸರ್ಚ್ ಪ್ರಾಧ್ಯಾಪಕ ಹಾಗೂ ಡೀನ್ ಪ್ರೊ. ವಿದ್ಯಾಧಿರಾಜ ಎನ್.ಎಸ್. ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ರಾಮು ಎಲ್., ಪೂರ್ಣಪ್ರಜ್ಞ ಅಕಾಡಮಿಕ್ ಹಾಗೂ ಸ್ಕೂಲ್ ನಿರ್ದೇಶಕ ಡಾ.ಸಿ.ಕೆ. ಮಂಜುನಾಥ್, ಡಾ.ವಿದ್ಯಾಲಕ್ಷ್ಮಿ ಭಟ್, ಡಾ.ಲಕ್ಷ್ಮೀಶ ರಾವ್ ಉಪಸ್ಥಿತರಿದ್ದರು. ಪಿಪಿಸಿ ವಿಜ್ಞಾನ ಸಂಘದ ಸಂಯೋಜಕ ಡಾ.ಕರಮಚಂದ್ ಕಿಶೋರ್ ಸ್ವಾಗತಿಸಿದರು.