ಇಂದ್ರಾಣಿ ಮುಖ್ಯಪ್ರಾಣ ಕುಂಭಾಭಿಷೇಕ ಸಂಪನ್ನ

ಲೋಕಬಂಧು ನ್ಯೂಸ್ ಉಡುಪಿ, ಏ.5
ಸಮಗ್ರ ಜೀರ್ಣೋದ್ಧಾರಗೊಂಡಿರುವ, ಇಂದ್ರಾಣಿ ಶ್ರೀಪಂಚದುರ್ಗಾಪರಮೇಶ್ವರಿ ದೇವಳಕ್ಕೊಳಪಟ್ಟಿರುವ ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರ ಬ್ರಹ್ಮಕುಂಭಾಭಿಷೇಕ ಭಾನುವಾರ ಬೆಳಿಗ್ಗೆ 9.15ರ ಸುಮುಹೂರ್ತದಲ್ಲಿ ವೇ.ಮೂ. ಪುತ್ತೂರು ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನವಾಯಿತು.ಬೆಳಿಗ್ಗೆ ಗಣಹೋಮ, ಪ್ರಧಾನ ಕಲಾಸಾನ್ನಿಧ್ಯ ಹೋಮ, 1001 ಕಲಶಾರಾಧನೆ ನಡೆಯಿತು.ಮಹಾಪೂಜೆ, ಪಲ್ಲಪೂಜೆ ಬಳಿಕ ನಡೆದ ಮಹಾಅನ್ನಸಂತರ್ಪಣೆಯಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಮಂದಿ‌ ಭೋಜನ ಪ್ರಸಾದ ಸ್ವೀಕರಿಸಿದರು.ಇಂದ್ರಾಣಿ ಶ್ರೀಮುಖ್ಯಪ್ರಾಣ ಮತ್ತು ಶ್ರೀನಾಗದೇವರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ, ಇಂದ್ರಾಣಿ ಪಂಚದುರ್ಗಾಪರಮೇಶ್ವರಿ ದೇವಳ ಆಡಳಿತ ಸಮಿತಿ ಅಧ್ಯಕ್ಷ ಕುಶಲ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ಸಮಿತಿ ಸದಸ್ಯರು ಮೊದಲಾದವರಿದ್ದರು.