ಯುವಶಕ್ತಿಗೆ ಮುಖ್ಯಪ್ರಾಣ ಪ್ರೇರಣೆಯಾಗಲಿ

ಲೋಕಬಂಧು ನ್ಯೂಸ್ | ಉಡುಪಿ, ಏ.5
ಸಮಾಜದ ಒಳಿತಿಗಾಗಿ ಯುವ ಸಮುದಾಯದ ಶಕ್ತಿ, ಸಾಮರ್ಥ್ಯ ಸದ್ವಿನಿಯೋಗವಾಗುವಂತಾಗಲು ಶ್ರೀ ಮುಖ್ಯಪ್ರಾಣ ದೇವರು ಪ್ರೇರಣೆಯಾಗಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ಇಂದ್ರಾಣಿ ಶ್ರೀ ಮುಖ್ಯಪ್ರಾಣ ಹಾಗೂ ಶ್ರೀ ನಾಗದೇವರ ನೂತನ ಶಿಲಾಮಯ ಗುಡಿಯಲ್ಲಿ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಅಂಗವಾಗಿ ಇಂದ್ರಾಣಿ ಶ್ರೀ ಪಂಚದುರ್ಗಾಪರಮೇಶ್ವರಿ ದೇವಳದ ವೇದಿಕೆಯಲ್ಲಿ ಶನಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ವ್ಯಕ್ತಿ ರಾಮನಂತೆ ಇರಬೇಕೇ ಹೊರತು ರಾವಣನಂತೆ ಇರಬಾರದು. ದೇಹ, ದೇಶ ಸೇವೆಯಲ್ಲಿ ಹೇಗೆ ತೊಡಗಿಕೊಳ್ಳಬೇಕೆನ್ನುವುದಕ್ಕೆ ಹನುಮ ಮಾದರಿ. ಬುದ್ದಿ, ಬಲ, ಯಶಸ್ಸು ಗಳಿಕೆ ಹನುಮ ಸ್ಮರಣೆಯಿಂದ ಸಾಧ್ಯ. ಯುವ ಸಮುದಾಯದಲ್ಲಿ ಉತ್ತಮ ಗುಣಗಳು ತುಂಬಲಿ, ದೇಶ ಸಮೃದ್ಧವಾಗಲಿ ಎಂದವರು ಹಾರೈಸಿದರು.


ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ ನಾಗಾರಾಧನೆ, ದೈವಾರಾಧನೆಯ ಮಣ್ಣಿನ ಗುಣದ ನಾಡಲ್ಲಿ ಜನರ ಸಹಭಾಗಿತ್ವದಿಂದ ಕ್ಷೇತ್ರದ ಪ್ರಗತಿ ಊರ ಅಭಿವೃದ್ಧಿಯ ಸಂಕೇತ ಎಂದರು.
ವೆಂಕಟರಾವ್ ಶ್ಯಾನುಭಾಗ್ ವಿರಚಿತ ಜೀವೋತ್ತಮ ಮುಖ್ಯಪ್ರಾಣ (ಕನ್ನಡೀಕೃತ ಹನುಮಾನ್ ಚಾಲೀಸಾ) ಕೃತಿ ಬಿಡುಗಡೆ ಮಾಡಲಾಯಿತು.


ಅಚಲ ಶ್ರದ್ಧೆ, ಭಕ್ತಿ ಮುಖ್ಯ
ಬಾರ್ಕೂರಿನ ವಿದ್ವಾಂಸ ದಾಮೋದರ ಶರ್ಮ ಧಾರ್ಮಿಕ ಪ್ರವಚನ ನೀಡಿ ಅಚಲ ಭಕ್ತಿ, ಶ್ರದ್ದೆಯಿಂದ ನಡೆಯುವವರನ್ನು ದೇವರು ಕೈಹಿಡಿದು ಮುನ್ನಡೆಸುತ್ತಾನೆ. ನಮ್ಮ ಹಿಂದೆ ಅಮ್ಮ ಇದ್ದಾಳೆ ಎನ್ನುವ ಭಾವ ಬೇಕು. ಸಕಾರಾತ್ಮಕವಾಗಿ ಧರ್ಮ ಕ್ಷೇತ್ರ ಬೆಳೆಯಬೇಕು. ದುರ್ಗೆಯಂತೆ ಹೆಣ್ಮಕ್ಕಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಧೈರ್ಯ, ಬುದ್ದಿಶಕ್ತಿ, ಪರಾಕ್ರಮದ ನೆಲೆಯಲ್ಲಿ ಹನುಮಂತ ಯುವಜನರಿಗೆ ಪ್ರೇರಣೆಯಾಗಬೇಕು. ಜನರು ಧಾರ್ಮಿಕ ಬದುಕಿನಿಂದ ದೂರವಾಗದಂತೆ ಧಾರ್ಮಿಕ ಶಿಕ್ಷಣ ನೀಡಬೇಕು, ಧರ್ಮಸಭೆಗೆ ಮಕ್ಕಳನ್ನು ಕರೆತರಬೇಕು ಎಂದರು.
ಶ್ರೀ ಮುಖ್ಯಪ್ರಾಣ ಮತ್ತು ನಾಗದೇವರ ಗುಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ, ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ಕಾಪು ವಾಸುದೇವ ಶೆಟ್ಟಿ, ಸ್ವದೇಶಿ ಸಮೂಹ ಸಂಸ್ಥೆಗಳ ಶ್ರೀನಾಗೇಶ್ ಹೆಗ್ಡೆ, ಉಜ್ವಲ್ ಸಮೂಹ ಸಂಸ್ಥೆಯ ಪುರುಷೋತ್ತಮ ಶೆಟ್ಟಿ, ಮುಂಬಯಿ ಜಾಜ್ ಇಂಟರ್ ನ್ಯಾಷನಲ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಬುಡ್ನಾರು ಜಯಕರ ಶೆಟ್ಟಿ, ಬೆಂಗಳೂರಿನ ಉದ್ಯಮಿ ಇಂದ್ರಾಳಿ ಕುಶಲ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತಾರಾಮ ನಾಯಕ್ ಮಂಚಿಕೋಡಿ ಉಪಸ್ಥಿತರಿದ್ದರು.


ಸುಪ್ರೀತಾ ರಾಜೇಶ್ ಪ್ರಾರ್ಥಿಸಿದರು. ಇಂದ್ರಾಣಿ ಶ್ರೀ ಮುಖ್ಯಪ್ರಾಣ ಮತ್ತು ಶ್ರೀ ನಾಗದೇವರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಶಮಿತಾ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ ವಂದಿಸಿದರು.


ಕಲಾಮಯಂ ಉಡುಪಿ ವತಿಯಿಂದ ಜನಪದ ಕಲರವ (ಜನಪದ, ರಂಗ ಸಂಗೀತ, ಜಾನಪದ ವಾದ್ಯ ಪರಿಕರಗಳ ಸಮ್ಮಿಲನ) ಕಾರ್ಯಕ್ರಮ ನಡೆಯಿತು.