ಲೋಕಬಂಧು ನ್ಯೂಸ್ | ಉಜಿರೆ, ಏ.16
ಶ್ರೀಕ್ಷೇತ್ರ ಧರ್ಮಸ್ಥಳದ ರಂಗಶಿವ ಕಲಾಬಳಗ ಆಶ್ರಯದಲ್ಲಿ ಆಯೋಜಿಸಲಾದ ನಲಿಯೋಣ ಬಾ ರಂಗ ಶಿಬಿರವನ್ನು ಬೆಂಗಳೂರಿನ ಕ್ಷೇಮವನದ ಸಿಇಓ ಶ್ರದ್ಧಾ ಅಮಿತ್ ಗಿಡಕ್ಕೆ ನೀರೆರೆಯುವ ಮೂಲಕ ಗುರುವಾರ ಉದ್ಘಾಟಿಸಿದರು.
ಶಿಕ್ಷಣದಲ್ಲಿ ರಂಗಭೂಮಿಯನ್ನು ಅಳವಡಿಸುವುದರಿಂದ ಮಕ್ಕಳ ಬೌದ್ಧಿಕ ಬೆಳವಣಿಗೆ ಹಾಗೂ ಅವರ ಸರ್ವತೋಮುಖ ಅಭಿವೃದ್ಧಿಗೆ ರಂಗಮಾದ್ಯಮ ಸಹಕಾರಿ ಎಂಬುದನ್ನು ಮನಗಂಡ ಹೇಮಾವತಿ ವೀ. ಹೆಗ್ಗಡೆ ಈಗಾಗಲೇ ರಂಗ ಶಿಕ್ಷಣದಲ್ಲಿ ಪದವಿ ಪಡೆದ ನೀನಾಸಂನ ನುರಿತ ರಂಗ ನಿರ್ದೇಶಕರಿಂದ ತರಬೇತಿ ನೀಡುವ ಮುಖಾಂತರ ಹಲವಾರು ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಿ ಕಲಾವಿದರನ್ನಾಗಿಸಿದ್ದಾರೆ.
ಸದಾಕಾಲ ಹೊಸ ಯೋಜನೆ, ಯೋಚನೆಗಳ ಮೂಲಕ ಕ್ರಿಯಾಶೀಲರಾಗಿರುವ ಹೇಮಾವತಿ ವೀ. ಹೆಗ್ಗಡೆ ಅವರೊಂದಿಗಿರುವ ಎಲ್ಲರನ್ನೂ ಕ್ರಿಯಾಶೀಲರನ್ನಾಗಿಸುತ್ತಾರೆ ಎಂಬುದಕ್ಕೆ ನಿದರ್ಶನವೆಂಬಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಸಹಕಾರದೊಂದಿಗೆ ಹೇಮಾವತಿ ವೀ. ಹೆಗ್ಗಡೆಯವರ ಪರಿಕಲ್ಪನೆ, ಮಾರ್ಗದರ್ಶನದಲ್ಲಿ ಸುನಿಲ್ ಶೆಟ್ಟಿ ಕಲ್ಲೊಪ್ಪ ಸಾರಥ್ಯದಲ್ಲಿ ಐದನೇ ವರ್ಷದ ಮಕ್ಕಳ ಬೇಸಿಗೆ ಶಿಬಿರ ಏ.24ರ ವರೆಗೆ ನಡೆಸಲಾಗುತ್ತದೆ.
ಮಕ್ಕಳನ್ನು ಶಿಬಿರದಲ್ಲಿ ಉತ್ತಮ ರೀತಿಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದ ಅವರು, ತನ್ನ ಬಾಲ್ಯದ ಸವಿನೆನಪುಗಳನ್ನು ಮೆಲುಕು ಹಾಕುತ್ತ ತಾನು ಸಣ್ಣವಳಿದ್ದಾಗ ಅಮ್ಮ ನಾಟಕ ಶಿಬಿರ ಪ್ರಾರಂಭಿಸಿದರು. ಈ ಪರಂಪರೆ ಮುಂದುವರಿಯುತ್ತಿರುವುದು ತುಂಬಾ ಸಂತೋಷದಾಯಕ.
ಶಾಲೆಯಿಂದ ಹೊರಬಂದು ಬೇರೆ ಬೇರೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಈಗಿನ ವಿದ್ಯಮಾನ ದಲ್ಲಿ ತುಂಬಾ ಮುಖ್ಯ. ಇನ್ನಷ್ಟು ಬೇರೆ ಬೇರೆ ಚಟುವಟಿಕೆಗಳಲ್ಲಿ ಬೆರೆತುಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು, ಕ್ಷೇತ್ರದಲ್ಲಿ ಹಲವಾರು ಅವಕಾಶಗಳಿವೆ ಬೇರೆ ಬೇರೆ ಕಾರ್ಯಕ್ರಮಗಳು ನಡೆಯುತ್ತದೆ ಈ ಸಂದರ್ಭವನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಜೀವನದಲ್ಲಿ ಬಾಲ್ಯದಿಂದ ದೊಡ್ಡವರಾಗುವ ವರೆಗೆ ಮುಖ್ಯವಾಗಿ ಮೂರು ಹವ್ಯಾಸಗಳು ಬೇಕು. ಮೊದಲನೆಯದಾಗಿ ಹಣ ಗಳಿಸುವ ಗುಣ ಜೀವನದಲ್ಲಿ ಮುಂದೆಬರುವುದಕ್ಕಾಗಿ, ಎರಡನೆಯದಾಗಿ ದೈಹಿಕವಾಗಿ ಸದೃಢರಾಗಿರಬೇಕು ಆರೋಗ್ಯವರ್ಧನೆಗೆ ಹಾಗೆಯೇ ಮೂರನೆಯದಾಗಿ ಸೃಜನಶೀಲತೆ ನಮ್ಮ ಬುದ್ದಿಗೆ ಕೆಲಸಕೊಡುವ ಮೂರು ಹವ್ಯಾಸಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಮಗೆ ಯಾವ ಯಾವ ಹವ್ಯಾಸಗಳಿವೆ ಎಂದು ಪ್ರಶ್ನೆಮಾಡಿಕೊಳ್ಳಿ ಎಂದು ಮಕ್ಕಳಿಗೆ ಸವಾಲು ನೀಡಿದರು.
ತಾವು ಮಾಡಿಕೊಳ್ಳುವ ಸಣ್ಣ ಹವ್ಯಾಸ ಕೂಡಾ ತಮ್ಮ ಬುದ್ದಿಗೆ ಕೆಲಸವನ್ನು ನೀಡುತ್ತದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಳೆವಿದ್ಯಾರ್ಥಿ ವಿಲಾಸ್ ನಾಯಕ್ ಅವರ ಪುಟ್ಟ ಹವ್ಯಾಸ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಬಗ್ಗೆ ಶ್ಲಾಘಿಸಿದರು.
ಶಿಬಿರದ ಮೊದಲನೇ ಸವಾಲಾಗಿ ಕೆಲವೊಂದು ಒಗಟುಗಳನ್ನು ಕೇಳುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಿದರು. ಶಿಬಿರದಲ್ಲಿ ಹೊಸ ಹೊಸ ಸ್ನೇಹಿತರನ್ನು ಮಾಡಿಕೊಂಡು ಶಿಬಿರದಲ್ಲಿ ಹೊಸ ಅನುಭವ ಗಳಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ರಂಗಶಿವದ ಅಧ್ಯಕ್ಷ ರಾಜೇಂದ್ರದಾಸ್ ಸ್ವಾಗತಿಸಿದರು. ಸಂಚಾಲಕ ಸಂದೇಶ ವಂದಿಸಿದರು. ಡಾ.ಅನನ್ಯ ನಿರೂಪಿಸಿದರು.
ಈ ಸಂದರ್ಭದಲ್ಲಿ ರಂಗಶಿವದ ಸದಸ್ಯರಾದ ಪದ್ಮರೇಖಾ ಅವರು ಶ್ರದ್ಧಾ ಅಮಿತ್ ಅವರನ್ನು ಗೌರವಿಸಿದರು. ಜಗದೀಶ್, ಅಭಿಲಾಷ್, ಅಭಿಷೇಕ್ ರಾವ್, ಸುಬ್ರಹ್ಮಣ್ಯ, ಲಿಂಗಪ್ಪ, ಮಧುಶ್ರೀ ಯಶವಂತ್ ಮೊದಲಾದವರಿದ್ದರು. ಧನಂಜಯ್ ಮತ್ತು ಸಂಗಡಿಗರು ಸಹಕರಿಸಿದರು.
