ಲೋಕಬಂಧು ನ್ಯೂಸ್ | ಉಡುಪಿ, ಏ.16
ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ನಾಗರಮಠದಲ್ಲಿ ಕಾನೂನು ಉಲ್ಲಂಘಿಸಿ ಅವೈಜ್ಞಾನಿಕವಾಗಿ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದ್ದು, ಅದನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿ ಕೃಷಿಕರು ಹಾಗೂ ಗ್ರಾಮಸ್ಥರು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗುರುವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಅವೈಜ್ಞಾನಿಕವಾಗಿ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದರೂ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.
ಗ್ರಾಮಸ್ಥರಾದ ಚಂದ್ರ ಕಾಂಚನ್ ಮಾತನಾಡಿ, ಮರಳುಗಾರಿಕೆಯಿಂದಾಗಿ ನಾಗರಮಠದ 100ಕ್ಕೂ ಅಧಿಕ ಕುಟುಂಬಗಳಿಗೆ ತೊಂದರೆ ಉಂಟಾಗಿದೆ. ನದಿಯ ಆಳದಿಂದ ಮರಳು ತೆಗೆಯುತ್ತಿರುವ ಕಾರಣ ಸಮೀಪದ ಪ್ರದೇಶಗಳ ಮನೆಗಳ ಬಾವಿಗಳ ನೀರು ಉಪ್ಪಾಗಿದೆ. ಐದು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಜಲ ಜೀವನ್ ಮಿಷನ್'ನ ಬಾವಿಯೂ ಕುಸಿಯುವ ಭೀತಿ ಎದುರಾಗಿದೆ. ನ್ಯಾಯ ಕೇಳಿದರೆ ನಮ್ಮ ಮೇಲೆಯೇ ಪ್ರಕರಣ ದಾಖಲಿಸಲಾಗುತ್ತಿದೆ. ಈಗಾಗಲೇ ಸುಮಾರು 24 ಮಂದಿ ಗ್ರಾಮಸ್ಥರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಕಾಂಚನ್ ಆಕ್ರೋಶ ವ್ಯಕ್ತಪಡಿಸಿದರು.
ಅಶೋಕ್ ಅಮೀನ್, ಕೃಷ್ಣ ಬಂಗೇರ, ಚಂದ್ರ ಕುಂದರ್, ಶ್ರೀನಿವಾಸ, ಆಶಾಲತಾ, ಪ್ರೇಮಾ, ವನಜಾ, ಆನಂದ ಶೆಟ್ಟಿಗಾರ್, ಡೆರಿಲ್ ಬಾಂಜ್, ಜೋಸೆಫ್ ಡಿ'ಸೋಜ, ಶೇಖರ ಮರಕಾಲ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
