ಭೈರವೈಕ್ಯ ಮಂದಿರ ಲೋಕಾರ್ಪಣೆಗೈದ ಪ್ರಧಾನಿ ಮೋದಿ

ಲೋಕಬಂಧು ನ್ಯೂಸ್ | ಮಂಡ್ಯ, ಏ.15
ಆದಿಚುಂಚನಗಿರಿ ಕ್ಷೇತ್ರದಲ್ಲಿ ನಿರ್ಮಿಸಲಾದ ಭೈರವೈಕ್ಯ ಮಂದಿರವನ್ನು ಬುಧವಾರ ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದರು.
ಅದಕ್ಕೂ ಮುನ್ನ ಪ್ರಧಾನಿ ಮೋದಿ ಜ್ವಾಲಾಪೀಠ (ಉರಿಗದ್ದುಗೆ)ಕ್ಕೆ ಭೇಟಿ ನೀಡಿದರು. ಇದು ಗುರು ಗೋರಖನಾಥರು ತಪಸ್ಸು ಮಾಡಿದ್ದ ಪವಿತ್ರ ಸ್ಥಳ ಎಂದು ನಂಬಲಾಗಿದೆ. ಅಲ್ಲಿ ದರ್ಶನ ಪಡೆದ ನಂತರ ಕ್ಷೇತ್ರದ ಅಧಿದೇವತೆ ಕಾಲಭೈರವನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಭೈರವೈಕ್ಯ ಮೂಲಮಂದಿರದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ, ದೇವಾಲಯವನ್ನು ಸಾರ್ವಜನಿಕ ಲೋಕಾರ್ಪಣೆಗೊಳಿಸಿದರು.
ಭೈರವೈಕ್ಯ ಮಂದಿರ ಆದಿಚುಂಚನಗಿರಿ ಮಠದ ಹಿಂದಿನ ಗುರುಗಳ ಸ್ಮರಣಾರ್ಥ ನಿರ್ಮಿಸಲಾದ ಭವ್ಯ ಸ್ಮಾರಕವಾಗಿದೆ.
ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಚೆಲುವನಾರಾಯಣಸ್ವಾಮಿ ಮೊದಲಾದವರಿದ್ದರು.
ಪ್ರಧಾನಿ ಭೇಟಿ ಶ್ರೀಕ್ಷೇತ್ರದ ಭಕ್ತರಲ್ಲಿ ಹೊಸ ಸಂಚಲನ ಮೂಡಿಸಿತು. ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.