ಸಮಗ್ರ ಭಾರತ ಪರಿಭ್ರಮಣ ಪಾದಯಾತ್ರೆಗೆ ಚಾಲನೆ

ಲೋಕಬಂಧು ನ್ಯೂಸ್ | ಉಡುಪಿ, ಮೇ 19
ಸಮಗ್ರ ಭಾರತವನ್ನು ಭಗವಂತನ ವಿಭೂತಿರೂಪವನ್ನಾಗಿ ಪರಿಗಣಿಸಿ ಶತಾವಧಾನಿ ಮಹಾಮಹೋಪಾಧ್ಯಾಯ ಡಾ.ರಾಮನಾಥ ಆಚಾರ್ಯ ಪ್ರದಕ್ಷಿಣಾ ರೂಪದಲ್ಲಿ ಪಾದಯಾತ್ರೆಗೆ ಸಂಕಲ್ಪಿಸಿದ್ದು, ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಚಾಲನೆ ನೀಡಿದರು.
ಪಾದಯಾತ್ರೆಯೊಂದಿಗೆ ಪುತ್ತಿಗೆ ಶ್ರೀಪಾದರ ವಿಶ್ವಗೀತಾ ಪರ್ಯಾಯದ ಮಹತ್ವಾಕಾಂಕ್ಷಿ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞ ಪ್ರಚಾರವನ್ನೂ ಎಲ್ಲೆಡೆ ನಡೆಸುವರು. ಪುತ್ತಿಗೆ ವಿದ್ಯಾಪೀಠದ ಈರ್ವರು ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಶಾಸ್ತ್ರಪಾಠವನ್ನೂ ನಡೆಸುವರು.


ಪುತ್ತಿಗೆ ಶ್ರೀಪಾದರು ಶ್ರೀಮಠದ ಕೋಟಿ ಗೀತಾ ಲೇಖನ ಯಜ್ಞ ಪ್ರಚಾರದ ವಾಹನವನ್ನು ಆಚಾರ್ಯರಿಗೆ ಹಸ್ತಾಂತರಿಸುವ ಮೂಲಕ ಮೇ 18ರಂದು ಭಾರತ ಪ್ರದಕ್ಷಿಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಪ್ರತಿದಿನ ಮುಂಜಾನೆ ಹಾಗೂ ಮುಸ್ಸಂಜೆ ನಡೆಸುವ ಪಾದಯಾತ್ರೆ ದಿನಕ್ಕೆ 25 ಕಿ.ಮೀ. ಕ್ರಮಿಸಲಿದ್ದು, ಉಡುಪಿಯಿಂದ ಬ್ರಹ್ಮಾವರ- ಕುಂಭಾಶಿ ಮಾರ್ಗವಾಗಿ ಉತ್ತರ ಕನ್ನಡ, ಮಹಾರಾಷ್ಟ್ರ, ಗುಜರಾತ್ ಹೀಗೆ ಮುಂದುವರಿದು ಸುಮಾರು ಒಂದು ವರ್ಷ ಕಾಲ ಸಮಗ್ರ ಭಾರತ ಪ್ರದಕ್ಷಿಣೆ ನಡೆಯಲಿದೆ.