ಹಿರಿಯ ಪತ್ರಕರ್ತ ಜನಾರ್ದನ ಮರವಂತೆ ನಿಧನ

ಲೋಕಬಂಧು ನ್ಯೂಸ್ ಬೈಂದೂರು, ಜೂ. 6
ಹಿರಿಯ ಪತ್ರಕರ್ತ, ನಿವೃತ್ತ ಪ್ರಾಂಶುಪಾಲ ಹಾಗೂ ರಾಷ್ಟ್ರ ಮಟ್ಟದ ಪಂಚಾಯತ್ ರಾಜ್ ತರಬೇತುದಾರ ಜನಾರ್ದನ ಮರವಂತೆ (88) ಅಲ್ಪಕಾಲದ ಅಸೌಖ್ಯದಿಂದ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಕೊನೆಯುಸಿರೆಳೆದರು.ಇಂಗ್ಲಿಷ್ ಭಾಷಾ ಉಪನ್ಯಾಸಕರಾಗಿದ್ದ ಅವರು ಬೈಂದೂರು, ನಾವುಂದ ಹಾಗೂ ಹೆಮ್ಮಾಡಿ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಶಿಕ್ಷಣ ಕ್ಷೇತ್ರದ ಜೊತೆಗೆ ಹವ್ಯಾಸಿ ಅಂಕಣಕಾರ ಹಾಗೂ ಪತ್ರಕರ್ತರಾಗಿಯೂ ಗುರುತಿಸಿಕೊಂಡಿದ್ದ ಅವರು, ಹಲವು ವರ್ಷಗಳ ಕಾಲ ಪ್ರಜಾವಾಣಿ ಮತ್ತು ಉದಯವಾಣಿ ಪತ್ರಿಕೆಗಳಿಗೆ ವರದಿಗಾರರಾಗಿದ್ದರು.


ಸಾಹಿತ್ಯ, ಶಿಕ್ಷಣ ಹಾಗೂ ಪಂಚಾಯತ್ ರಾಜ್ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿದ್ದ ಅವರು ವಿವಿಧ ವೇದಿಕೆಗಳಲ್ಲಿ ಉಪನ್ಯಾಸ ಮತ್ತು ವಿಚಾರ ಮಂಡನೆಗಳ ಮೂಲಕ ಜನಜಾಗೃತಿ ಮೂಡಿಸಿದ್ದರು.


ತಾಲೂಕು ಕಾನೂನು ನೆರವು ಸಲಹಾ ಸಮಿತಿ ಸದಸ್ಯರೂ ಆಗಿದ್ದರು.
ಮರವಂತೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಅಧ್ಯಕ್ಷರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಅವರು, ತನ್ನ ಅವಧಿಯಲ್ಲಿ ಗ್ರಾಮ ಪಂಚಾಯತ್‌ಗೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಗೌರವ ತಂದುಕೊಟ್ಟಿದ್ದರು


ಪಂಚಾಯತ್ ರಾಜ್ ವ್ಯವಸ್ಥೆ ಕುರಿತು ಹೊಂದಿದ್ದ ವಿಶಿಷ್ಟ ಪರಿಣತಿಯ ಕಾರಣದಿಂದ ಮೈಸೂರು ಪಂಚಾಯತ್ ರಾಜ್ ತರಬೇತಿ ಕೇಂದ್ರದ ತರಬೇತುದಾರರಾಗಿ ನೇಮಕಗೊಂಡಿದ್ದರು.


ಮರವಂತೆ ಸಾಹಿತ್ಯ ಸಮ್ಮೇಳನ, ತ್ರಾಸಿ- ಮರವಂತೆ ಕಡಲತೀರ ವ್ಯವಸ್ಥೆಯ ಹಕ್ಕುಗಳ ಹೋರಾಟಗಳ ನೇತೃತ್ವ ವಹಿಸಿದ್ದರು. 'ಸಾಧನಾ ಮರವಂತೆ' ಸಂಸ್ಥೆಯ ಮೂಲಕ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸಿ ಜನಮನ್ನಣೆ ಗಳಿಸಿದ್ದರು.

ಉಡುಪಿ ಜಿಲ್ಲಾ‌ ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಸದಸ್ಯರಾಗಿದ್ದ ಅವರು, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದರು. ನಾಡ ರಾಬರ್ಟ್ ಝಡ್.ಎಂ. ಡಿ'ಸೋಜ ಐಟಿಐ ಸಂಸ್ಥೆಯ ವಿಶ್ವಸ್ಥ ಮಂಡಳಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.

ಸಂತಾಪ
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಬೈಂದೂರು ತಾಲೂಕು ಘಟಕದ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಜನಾರ್ದನ ಎಸ್. ಮರವಂತೆ ನಿಧನಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.