ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ

ಲೋಕಬಂಧು ನ್ಯೂಸ್ | ಉಡುಪಿ, ಜೂ. 9
ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ದೇಶಾದ್ಯಂತ ಗೋಹತ್ಯೆ ಹಾಗೂ ಗೋಮಾಂಸ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸುವ ಕಾನೂನು ಜಾರಿಗೊಳಿಸಬೇಕು ಎಂದು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಆಗ್ರಹಿಸಿದೆ.
ಮಂಗಳವಾರ ವೇದಿಕೆ ವಕ್ತಾರ ಮುಷ್ತಾಕ್ ಹೆನ್ನಾಬೈಲು ಸಿದ್ದಿಗೋಷ್ಟಿಯಲ್ಲಿ ಮಾತನಾಡಿ, ದೇಶದಲ್ಲಿರುವ ಕಸಾಯಿಖಾನೆಗಳನ್ನು ಮುಚ್ಚಿ ಗೋಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದರು.


ಗೋಹತ್ಯೆ ವಿಚಾರದಲ್ಲಿ ದೊಡ್ಡ ಜಾಗತಿಕ ಸಮುದಾಯಗಳನ್ನು ಕೇಂದ್ರ ಸರ್ಕಾರ ಯಾಮಾರಿಸುತ್ತಿದೆ ಎಂದು ಆರೋಪಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಕಾರಾತ್ಮಕ ವಿಚಾರಗಳನ್ನೇ ಹಬ್ಬಿಸುತ್ತಿದೆ. ಈ ವಿಷಯದಲ್ಲಿ ಕೇವಲ ಪ್ರಚಾರ ನಡೆಯುತ್ತಿದ್ದು, ಗೋಹತ್ಯೆ ನಿಷೇಧಿಸುವ ಕುರಿತು ಸರ್ಕಾರ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಟೀಕಿಸಿದರು.


ಬಿಜೆಪಿ ಆಡಳಿತವಿರುವ ಕೆಲವು ರಾಜ್ಯಗಳಿಂದಲೇ ಗೋಮಾಂಸ ರಫ್ತು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಗೋಹತ್ಯೆ ಹಾಗೂ ಗೋಮಾಂಸ ರಫ್ತು ತಡೆಯುವ ನಿಟ್ಟಿನಲ್ಲಿ ಸಮರ್ಪಕ ಕ್ರಮ ಕೈಗೊಂಡಿಲ್ಲ. ಕೇಂದ್ರ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ದೇಶದಲ್ಲಿ ಗೋಹತ್ಯೆ ನಿಷೇಧಿಸುವ ಕಾನೂನು ರೂಪಿಸಿ ಗೋ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಆ ಕುರಿತು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಸಂವಿಧಾನಾತ್ಮಕ ಹಕ್ಕುಗಳಡಿ ಶಾಂತಿಯುತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.


ಸುದ್ದಿಗೋಷ್ಟಿಯಲ್ಲಿ ಮುಸ್ಲಿಂ ಬಾಂಧವ್ಯ ವೇದಿಕೆ ಪ್ರಮುಖರಾದ ಅಬ್ದುಲ್ ಹಫೀಝ್ ಖಾಸಿಮಿ, ಝಾಕೀರ್ ಹುಸೈನ್ ಉಚ್ಚಿಲ, ಇಬ್ರಾಹಿಂ ನಡುಪದವು ಮತ್ತು ಇಬ್ರಾಹಿಂ ಕೋಟ ಇದ್ದರು.