ಲೋಕಬಂಧು ನ್ಯೂಸ್ ಉಡುಪಿ, ಜು.13
ರಾಜ್ಯದಲ್ಲಿ ಪರಿಶಿಷ್ಟ ಜಾತಿ (ಎಸ್.ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್.ಟಿ) ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಜಾರಿಗೆ ತರಲಾಗಿರುವ 56 ಶೇ. ಮೀಸಲಾತಿ ಕಾಯ್ದೆಯನ್ನು ತಕ್ಷಣವೇ ಸಂವಿಧಾನದ 9ನೇ ಅನುಸೂಚಿಗೆ ಸೇರಿಸಬೇಕು. ಜೊತೆಗೆ ರಾಜ್ಯದಲ್ಲಿ ಹೆಚ್ಚುತ್ತಿರುವ ನಕಲಿ ಜಾತಿ ಪ್ರಮಾಣಪತ್ರಗಳ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಒತ್ತಾಯಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂಬ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನ್ಯಾ. ನಾಗಮೋಹನದಾಸ್ ಹಾಗೂ ನ್ಯಾ.ಸುಭಾಷ್ ಆಡಿ ಆಯೋಗಗಳ ವರದಿಗಳ ಆಧಾರದ ಮೇಲೆ ಎಸ್.ಸಿ ಮೀಸಲಾತಿಯನ್ನು 15 ಶೇ.ದಿಂದ 17 ಶೇ.ಕ್ಕೆ ಹಾಗೂ ಎಸ್.ಟಿ. ಮೀಸಲಾತಿಯನ್ನು 3 ಶೇ.ದಿಂದ 7 ಶೇ.ಕ್ಕೆ ಹೆಚ್ಚಿಸಿ 2022ರಲ್ಲಿ ರಾಜ್ಯ ಸರ್ಕಾರ ಕಾಯ್ದೆ ಜಾರಿಗೆ ತಂದಿತ್ತು. ಆದರೆ, ಈ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸದಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೈಕೋರ್ಟ್ 56 ಶೇ. ಮೀಸಲಾತಿ ಜಾರಿಗೆ ತಡೆಯಾಜ್ಞೆ ನೀಡಿದೆ.
ಈ ತಡೆಯಾಜ್ಞೆಯಿಂದ 2023- 24 ಹಾಗೂ 2024- 25ನೇ ಸಾಲಿನಲ್ಲಿ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಎಸ್ಸಿ, ಎಸ್.ಟಿ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಸಾವಿರಾರು ವಿದ್ಯಾರ್ಥಿಗಳು ಮತ್ತು ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ನಿರ್ಣಯ ಕೈಗೊಂಡಿದ್ದರೂ ಕೇಂದ್ರ ಸರ್ಕಾರದ ಮೇಲೆ ಅಗತ್ಯ ಒತ್ತಡ ಹೇರುವಲ್ಲಿ ವಿಫಲವಾಗಿದೆ ಎಂದು ಉಗ್ರಪ್ಪ ಟೀಕಿಸಿದರು.
ರಾಜ್ಯದಲ್ಲಿ ಲಕ್ಷಾಂತರ ಮಂದಿ ನಕಲಿ ಎಸ್.ಸಿ ಮತ್ತು ಎಸ್.ಟಿ ಜಾತಿ ಪ್ರಮಾಣಪತ್ರ ಪಡೆದು ನೈಜ ಫಲಾನುಭವಿಗಳಿಗೆ ಮೀಸಲಾಗಿರುವ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆದರಿಂದ ನಿಜವಾದ ಅರ್ಹರಿಗೆ ಅವಕಾಶಗಳು ತಪ್ಪುತ್ತಿದ್ದು, ಸಾಮಾಜಿಕ ನ್ಯಾಯದ ಆಶಯಕ್ಕೆ ಧಕ್ಕೆಯಾಗುತ್ತಿದೆ ಎಂದು ಉಗ್ರಪ್ಪ ಕಳವಳ ವ್ಯಕ್ತಪಡಿಸಿದರು.
ಮೀಸಲಾತಿ ರಕ್ಷಣೆಗಾಗಿ ರಾಜ್ಯ ಸರ್ಕಾರ ತಕ್ಷಣ ಸರ್ವಪಕ್ಷಗಳ ಸಭೆ ಕರೆಯಬೇಕು. ಮುಖ್ಯಮಂತ್ರಿ ನೇತೃತ್ವದಲ್ಲಿ ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕರೆದೊಯ್ದು ಪ್ರಧಾನಮಂತ್ರಿಯನ್ನು ಭೇಟಿ ಮಾಡಿ 56 ಶೇ. ಮೀಸಲಾತಿ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಲು ಒತ್ತಾಯಿಸಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಮಂಜುನಾಥ ಮಣ್ಣೂರು, ಪ್ರಕಾಶ್ ನಾಗಪ್ಪ ದೇಸಾಯಿ, ಹನುಮಂತರಾಯಪ್ಪ ಹಾಗೂ ನರಸಿಂಹ ನಾಯ್ಕ ಉಪಸ್ಥಿತರಿದ್ದರು.