ಶಂಕರಾಚಾರ್ಯರಿಗೆ ನಿಂದನೆ: ಕೃಷ್ಣಮಠ ವಿಷಾದ

ಲೋಕಬಂಧು ನ್ಯೂಸ್ | ಉಡುಪಿ, ಜು.13
ಕಳೆದ ಜು.11ರಂದು ಕೃಷ್ಣಮಠ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರನ್ನು ನಿಂದಿಸಿದ ಪ್ರಕರಣ ಕುರಿತು ಪರ್ಯಾಯ ಶೀರೂರು ಮಠದ ದಿವಾನ ಡಾ.ಉದಯ ಕುಮಾರ್ ಸರಳತ್ತಾಯ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜಾಂಗಣದಲ್ಲಿ ಅಂಕಿತಾ ನಾಯ್ಕ ಮತ್ತು ಗೌರಿ ಪಾಂಡುರಂಗಿ ಎಂಬವರು ಒಂದು ಗಂಟೆ ಅವಧಿಯ ಭರತನಾಟ್ಯ ಮತ್ತು ಹರಿವಾಣ ನೃತ್ಯ ಸೇವೆಯ ಕಾರ್ಯಕ್ರಮದ ಬಗ್ಗೆ ಅನುಮತಿ ಪಡೆದು ಕಾರ್ಯಕ್ರಮದ ನಡುವೆ 'ಭಕ್ತ ಪ್ರಹ್ಲಾದ' ಎಂಬ ಹರಿಕಥಾ ಕಾರ್ಯಕ್ರಮವನ್ನು ನಡೆಸಿದ್ದು, ಆ ಸಂದರ್ಭದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ.


ಆ ಬಗ್ಗೆ ಅಂಕಿತಾ ನಾಯ್ಕ ಮತ್ತು ಗೌರಿ ಪಾಂಡುರಂಗಿ ಅವರು ಈ ಬಗ್ಗೆ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಲು ತಿಳಿಸಿದ್ದು, ಈಗಾಗಲೇ ಅವರು ಕ್ಷಮೆ ಯಾಚಿಸಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.


ತಾವು‌‌ ಪುಸ್ತಕವೊಂದನ್ನು ಆಧರಿಸಿ ವಿಚಾರ ತಿಳಿಸಿದ್ದು, ಶ್ರೀ ಶಂಕರಾಚಾರ್ಯರನ್ನು ಅವಮಾನ‌ ಮಾಡುವ ಉದ್ದೇಶ ಇರಲಿಲ್ಲ. ನಮ್ಮಿಂದ ನೋವಾದಲ್ಲಿ ಕ್ಷಮೆ‌‌ ಕೇಳುತ್ತೇವೆ ಎಂದು ತಿಳಿಸಿದ್ದಾರೆ.


ಈ ಅನಪೇಕ್ಷಿತ ಘಟನೆ ಬಗ್ಗೆ  ಪರ್ಯಾಯ ಶೀರೂರು ಶ್ರೀಕೃಷ್ಣ ‌ಮಠ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದಾರೆ.