ಅಯೋಧ್ಯೆ ಪ್ರಕರಣ: ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಲಿ

ಲೋಕಬಂಧು ನ್ಯೂಸ್ | ಉಡುಪಿ, ಜು.8
ಅಯೋಧ್ಯೆ ಶ್ರೀರಾಮ ಮಂದಿರದ ಹುಂಡಿ ಹಣ ಲೂಟಿ ಪ್ರಕರಣ ಹಾಗೂ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ಆರೋಪಗಳ ಕುರಿತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ವಿನಯ‌ಕುಮಾರ್ ಸೊರಕೆ ಆಗ್ರಹಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನ ಹೆಸರನ್ನು ಬಳಸಿಕೊಂಡು ಬಿಜೆಪಿ ಚುನಾವಣೆಗಳನ್ನು ಎದುರಿಸಿದ್ದು, ಮನೆ- ಮನೆಗೆ ಇಟ್ಟಿಗೆ ನೀಡಿ ಪೂಜೆ ಮಾಡಿಸಿ ಮತ ಯಾಚನೆ ಮಾಡಿದೆ. ಆದರೆ, ರಾಮ ಮಂದಿರಕ್ಕಾಗಿ ದಶಕಗಳಿಂದ ಸಂಗ್ರಹಿಸಲಾದ ಹಣದ ಸಂಪೂರ್ಣ ಲೆಕ್ಕಪತ್ರ ಸಾರ್ವಜನಿಕರಿಗೆ ಲಭ್ಯವಿಲ್ಲ.


ಮಂದಿರ ನಿರ್ಮಾಣದ ವೇಳೆ ರಿಯಲ್ ಎಸ್ಟೇಟ್ ವ್ಯವಹಾರ ನಡೆದಿರುವ ಆರೋಪಗಳಿದ್ದು, ಟ್ರಸ್ಟ್ ಸದಸ್ಯರು ಅದಕ್ಕೆ ಉತ್ತರಿಸಬೇಕಾಗಿದೆ. ಕರ್ನಾಟಕದ ಟ್ರಸ್ಟಿಯೊಬ್ಬರ ಅಳಿಯನಿಗೆ ನಿರ್ಮಾಣ ಕಾಮಗಾರಿಯಲ್ಲಿ ಅವಕಾಶ ನೀಡಲಾಗಿತ್ತು ಎಂಬ ಆರೋಪವೂ ಇದೆ ಎಂದು ಸೊರಕೆ ಹೇಳಿದರು.


ರಾಮ ಮಂದಿರಕ್ಕೆ ಭಕ್ತರು ನೀಡಿದ ಚಿನ್ನವನ್ನು ಕರ್ನಾಟಕದಲ್ಲೇ ಕರಗಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯಿಂದ ರಾಮ ಮಂದಿರವನ್ನು ಹೊರಗಿಡಲಾಗಿದೆ ಎಂದವರು ದೂರಿದರು.


ಸಿಸಿ ಟಿವಿ ಕ್ಯಾಮೆರಾಗಳನ್ನು ತೆಗೆದುಹಾಕಿರುವುದು ಹಾಗೂ ಮಂದಿರದ ಕಟ್ಟಡದ ಕೆಲವು ಭಾಗಗಳು ಹಾನಿಗೊಳಗಾಗುವ ಸ್ಥಿತಿಯಲ್ಲಿವೆ ಎಂಬ ವರದಿಗಳ ಕುರಿತು ಸಮಗ್ರ ತನಿಖೆ ನಡೆಯಬೇಕು ಸೊರಕೆ ಒತ್ತಾಯಿಸಿದರು.


ಈ ಎಲ್ಲಾ ಆರೋಪಗಳ ಸತ್ಯಾಸತ್ಯತೆ ಎಸ್‌ಐಟಿ ತನಿಖೆಯಿಂದ ಹೊರಬರಲಾರದು. ಹಾಗಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲೇ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಭಕ್ತರ ಭಾವನೆಗೆ ಧಕ್ಕೆ ಉಂಟಾಗದಂತೆ ಪಾರದರ್ಶಕ ತನಿಖೆ ನಡೆಯಬೇಕು ಎಂದು ವಿನಯ ಕುಮಾರ್ ಸೊರಕೆ ಒತ್ತಾಯಿಸಿದರು.


ಮನ್ ಕೀ ಬಾತ್'ನಲ್ಲೇಕೆ ಮೌನ?
ಪ್ರಧಾನಿ ಮೋದಿ ಮನ್ ಕಿ ಬಾತ್'ನಲ್ಲಿ ಎಲ್ಲ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ರಾಮ ಮಂದಿರ ಹಗರಣದ ಬಗ್ಗೆ ಮೌನ ವಹಿಸಿದ್ದಾರೆ ಎಂದು ಸೊರಕೆ ಆಕ್ರೋಶ ವ್ಯಕ್ತಪಡಿಸಿದರು.


ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಕಾಪು ಬ್ಲಾಕ್ ಕಾಂಗ್ರೆಸ್ (ದಕ್ಷಿಣ) ಅಧ್ಯಕ್ಷ ವೈ. ಸುಕುಮಾ‌ರ್ ಸುದ್ದಿಗೋಷ್ಠಿಯಲ್ಲಿದ್ದರು.