ಲೋಕಬಂಧು ನ್ಯೂಸ್ ಮಣಿಪಾಲ, ಜು.13
ಕುಂದಾಪುರ ತಾಲೂಕಿನ ಆಲೂರು ಹಾಗೂ ಹರ್ಕೂರು ಗ್ರಾಮದ ಭೂ ರಹಿತ ಕೊರಗ (ಪರಿಶಿಷ್ಟ ಪಂಗಡ) ಕುಟುಂಬಗಳಿಗೆ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮತ್ತು ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ಹಾಗೂ ಹಕ್ಕೊತ್ತಾಯ ನಡೆಸಲಾಯಿತು.ಧರಣಿಯಲ್ಲಿ ಕೊರಗ ಸಮುದಾಯದ ಅನೇಕ ಸದಸ್ಯರು, ವಿವಿಧ ಜನಪರ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ ಸುಮಾರು 10 ವರ್ಷಗಳಿಂದ ಬಾಕಿ ಉಳಿದಿರುವ ಭೂಮಿ ಮಂಜೂರಾತಿ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸುವಂತೆ ಒತ್ತಾಯಿಸಿದರು.
ಧರಣಿ ನಡೆಯುತ್ತಿರುವ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಧರಣಿ ನಿರತ ನಿಯೋಗವನ್ನು ತಮ್ಮ ಕಚೇರಿಗೆ ಆಹ್ವಾನಿಸಿ, ಪ್ರಕರಣದ ಕುರಿತು ವಿಸ್ತೃತ ಚರ್ಚೆ ನಡೆಸಿದರು. ಸಂಘಟನೆಯಿಂದ ಸಲ್ಲಿಸಲಾದ ಹಕ್ಕೊತ್ತಾಯ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಆಲೂರು ಗ್ರಾಮದ ಕೊರಗ ಕುಟುಂಬಗಳ ಭೂಮಿ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ಇದ್ದು, ಸಂಘಟನೆ ಈ ಹಿಂದೆ ಸಲ್ಲಿಸಿರುವ ದಾಖಲೆಗಳು ಹಾಗೂ ವಿವಿಧ ಇಲಾಖೆಗಳ ವರದಿಗಳು ಜಿಲ್ಲಾಡಳಿತದ ಬಳಿ ಇದೆ. ಶೀಘ್ರದಲ್ಲೇ ಸಂಬಂಧಿಸಿದ ಎಲ್ಲಾ ಇಲಾಖೆಗಳ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.
ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಲೂರು ಗ್ರಾಮದ ಸರ್ವೇ ನಂ.153, 154, 148/3 ಹಾಗೂ 148/4 ಮತ್ತು ಹರ್ಕೂರು ಗ್ರಾಮದ ಸರ್ವೇ ನಂ.144/1, 150/3ರಲ್ಲಿ ಗುರುತಿಸಲಾದ ಒಟ್ಟು 10.67 ಎಕರೆ ಭೂಮಿಯನ್ನು 13 ಭೂ ರಹಿತ ಕೊರಗ ಕುಟುಂಬಗಳಿಗೆ ಕೂಡಲೇ ಮಂಜೂರು ಮಾಡಬೇಕು ಜೊತೆಗೆ ಹರ್ಕೂರು ಗ್ರಾಮದ ಸರ್ವೇ ನಂ.135ರಲ್ಲಿ 1984-85ರಲ್ಲಿಯೇ ಮಂಜೂರಾಗಿರುವ ಭೂಮಿಯ ಸ್ವಾಧೀನವನ್ನು ಮೂಲ ಫಲಾನುಭವಿಗಳಿಗೆ ತಕ್ಷಣ ಒದಗಿಸುವಂತೆ ಒತ್ತಾಯಿಸಲಾಯಿತು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಸಲ್ಲಿಸಿರುವ ಆಧಾರ ರಹಿತ ಆಕ್ಷೇಪಣೆಯನ್ನು ತಿರಸ್ಕರಿಸಿ, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಎಲ್ಲಾ ಇಲಾಖೆಗಳ ಉನ್ನತ ಮಟ್ಟದ ಸಭೆಯನ್ನು ಶೀಘ್ರದಲ್ಲಿ ನಡೆಸಿ ಜಿಲ್ಲಾ ಮಟ್ಟದಲ್ಲಿಯೇ ಪ್ರಕರಣವನ್ನು ಅಂತಿಮವಾಗಿ ಇತ್ಯರ್ಥಪಡಿಸಿ ಕೊರಗ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಸಂಘಟನೆ ಒತ್ತಾಯಿಸಿತು.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ, ರಾಜ್ಯ ಸಮಿತಿ ಸದಸ್ಯರಾದ ಕೃಷ್ಣ ಇನ್ನಾ ಮತ್ತು ಗಣೇಶ ಆಲೂರು, ಸದಸ್ಯರಾದ ರೇವತಿ ಆಲೂರು ಮತ್ತು ಕೊರಗ ನಾರ್ಕಳಿ, ಪಡುಬಿದ್ರಿ ಘಟಕದ ಕಾರ್ಯದರ್ಶಿ ತುಳಸಿ, ರೇಷ್ಮಾ ನಾಡ, ಮಾಲತಿ ಆಲೂರು, ಶೇಖರ ನಾರ್ಕಳಿ, ಬಾಬು ಪಾಂಗಾಳ, ಕುಡುಪ ಕೊರಗ, ವಸಂತ ಕೊರಗ, ಕಾರ್ಮಿಕ ಮುಖಂಡರಾದ ಸುರೇಶ್ ಕಲ್ಲಾಗರ್, ಚಂದ್ರಶೇಖರ, ಎಚ್.ನರಸಿಂಹ ಮೊದಲಾದವರಿದ್ದರು.