ಲೋಕಬಂಧು ನ್ಯೂಸ್ | ಕಟೀಲು, ಜು.4
ನಾಡಿನ ಹಿರಿಯ ಬಹುಶ್ರುತ ವಿದ್ವಾಂಸ, ಲೇಖಕ, ಕಲಾವಿದ ಪ್ರಾಧ್ಯಾಪಕ ಡಾ.ಎಂ. ಪ್ರಭಾಕರ ಜೋಶಿ ಅವರಿಗೆ ಈ ಬಾರಿಯ ಕಟೀಲು ಪು.ಶ್ರೀನಿವಾಸ ಭಟ್ಟ ಪ್ರಶಸ್ತಿ ಘೋಷಿಸಲಾಗಿದೆ.
ಸಾಹಿತಿ ಪು.ಶ್ರೀ. ಅವರ ಆಸಕ್ತಿ ಮತ್ತು ಸಾಧನೆಯ ಕ್ಷೇತ್ರಗಳಲ್ಲಿ ವಿಶಿಷ್ಟ, ಗಣನೀಯ ಕೊಡುಗೆ ನೀಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.
ಡಾ.ಜೋಶಿ ಮೂಲತಃ ಕಾರ್ಕಳದ ಮಾಳದವರು. ಯಕ್ಷಗಾನ ಕಲಾವಿದ, ವಿಮರ್ಶೆ, ಮೌಲ್ಯರಕ್ಷಣೆ, ಶಿಕ್ಷಣ, ಸಂಸ್ಕೃತಿ, ತತ್ವಶಾಸ್ತ್ರ, ಭಾಷೆ, ಸಾಂಸ್ಥಿಕ ಸೇವೆಗಳಲ್ಲಿ ಆರು ದಶಕಗಳಿಗೂ ಮಿಕ್ಕಿ ಸಕ್ರಿಯರು.
ತಾಳಮದ್ದಲೆ ಅರ್ಥದಾರಿ, ಹಲವು ಗ್ರಂಥಗಳನ್ನು, ನೂರಾರು ಲೇಖನಗಳನ್ನು ಬರೆದವರು, ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕಸಾಪ ಗೌರವ ಪ್ರಶಸ್ತಿ, ಕಟೀಲು ಪ್ರಶಸ್ತಿ, ಸಂಪಾಜೆ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಮಣಿಪಾಲ ಪ್ರಶಸ್ತಿ, ಕಲ್ಕೂರ ಪ್ರಶಸ್ತಿ, ಕಲಾರಂಗ ಪ್ರಶಸ್ತಿ, ಪಟ್ಲ ಪ್ರಶಸ್ತಿ ಸಹಿತ ನೂರಾರು ಮನ್ನಣೆಗಳಿಗೆ ಭಾಜನರು.
ಡಾ.ಜೋಶಿ ಅವರು ಪು.ಶ್ರೀನಿವಾಸ ಭಟ್ಟರ ದೀರ್ಘ ಕಾಲದ ಒಡನಾಡಿಯೂ ಆಗಿದ್ದಾರೆ.
