ಲೋಕಬಂಧು ನ್ಯೂಸ್ | ಉಡುಪಿ, ಜು.7
ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಇತ್ತೀಚಿನ ದಿನಗಳಲ್ಲಿ ಪದೇ ಪದೇ ಬಾಂಬ್ ಬೆದರಿಕೆ ಇ-ಮೇಲ್ ಮತ್ತು ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಭದ್ರತೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ಮತ್ತಷ್ಟು ಬಿಗಿಗೊಳಿಸಿದೆ.
ನ್ಯಾಯಾಲಯದ ಕಲಾಪಗಳು ಯಾವುದೇ ಅಡಚಣೆಯಿಲ್ಲದೆ ನಡೆಯುವಂತೆ ಹಾಗೂ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿದಿನ ಬೆಳಗ್ಗೆ ನ್ಯಾಯಾಲಯ ಕಲಾಪ ಆರಂಭವಾಗುವ ಮುನ್ನ ಸಂಪೂರ್ಣ ಕೋರ್ಟ್ ಆವರಣದಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.
ಪ್ರತಿದಿನ ಬೆಳಗ್ಗೆ ಪೊಲೀಸ್ ಸಿಬ್ಬಂದಿ ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಹಕಾರದೊಂದಿಗೆ ನ್ಯಾಯಾಲಯದ ಕಟ್ಟಡ, ನ್ಯಾಯಾಂಗ ಸಭಾಂಗಣ, ವಾಹನ ನಿಲುಗಡೆ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ತಪಾಸಣೆ ಪೂರ್ಣಗೊಂಡ ಬಳಿಕವೇ ನ್ಯಾಯಾಲಯದ ದೈನಂದಿನ ಕಲಾಪಗಳಿಗೆ ಅವಕಾಶ ನೀಡಲಾಗುತ್ತಿದೆ.
ಉಡುಪಿ ವಕೀಲರ ಸಂಘದ ಮನವಿಯ ಮೇರೆಗೆ ನ್ಯಾಯಾಲಯದ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಾಗಿದೆ.
ಅಪರಿಚಿತ ವ್ಯಕ್ತಿಗಳ ಅನಗತ್ಯ ಪ್ರವೇಶ ನಿಯಂತ್ರಿಸುವ ಉದ್ದೇಶದಿಂದ ನ್ಯಾಯಾಲಯದ ಕೆಲವು ಪ್ರವೇಶ ದ್ವಾರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು ನಿಗದಿತ ದ್ವಾರಗಳ ಮೂಲಕ ಮಾತ್ರ ಸಿಬ್ಬಂದಿ, ವಕೀಲರು, ಕಕ್ಷಿದಾರರು ಹಾಗೂ ಸಾರ್ವಜನಿಕರಿಗೆ ಪ್ರವೇಶ ನೀಡಲಾಗುತ್ತಿದೆ. ಅಗತ್ಯವಿದ್ದಲ್ಲಿ ಗುರುತಿನ ಚೀಟಿ ಪರಿಶೀಲನೆ ಹಾಗೂ ಬ್ಯಾಗ್ ತಪಾಸಣೆಯನ್ನೂ ನಡೆಸಲಾಗುತ್ತಿದೆ.
