ಪರಿಸರಸ್ನೇಹಿ ವಸ್ತುಗಳ ಮಾರಾಟ ಶಾಪ್ ‘ವೀಕೆ ಸೊಲ್ಯೂಷನ್ಸ್' ಶುಭಾರಂಭ

ಲೋಕಬಂಧು ನ್ಯೂಸ್ | ಉಡುಪಿ, ಜು.4
ಜೋಳದ ಹಿಟ್ಟು ಮತ್ತು ಮರಗೆಣಸು ಉಪಯೋಗಿಸಿ ಮಾಡಲ್ಪಟ್ಟ ಪರಿಸರಸ್ನೇಹಿ ಚೀಲ ಸಹಿತ ಇನ್ನಿತರ ವಸ್ತುಗಳ ಸಗಟು ಮತ್ತು ಬಿಡಿ ಮಾರಾಟ ಮಳಿಗೆ ವೀಕೆ ಸೊಲ್ಯೂಷನ್ಸ್ ನಗರದ ಕಲ್ಪನಾ ಟಾಕೀಸ್ ಎದುರಿನ ಕಂಫರ್ಟ್ ಟವರ್‌ನಲ್ಲಿ ಶುಕ್ರವಾರ ಶುಭಾರಂಭಗೊಂಡಿತು.
ಹಿರಿಯ ವಕೀಲ ಎಂ.ಶಾಂತಾರಾಮ ಶೆಟ್ಟಿ ಉದ್ಘಾಟಿಸಿ, ದೈನಂದಿನ ಚಟುವಟಿಕೆಗಳಲ್ಲಿ ಪ್ಲಾಸ್ಟಿಕ್ ಈಗ ಅನಿವಾರ್ಯವಾಗಿದೆ. ಪ್ಲಾಸ್ಟಿಕ್ ಇಲ್ಲದೆ ಜೀವನವಿಲ್ಲ. ಆದರೆ, ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಬಹಳಷ್ಟು ದುಷ್ಪರಿಣಾಮ ಇದೆ.


80ರ ದಶಕದ ನಂತರ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಬಳಸಿ ಎಸೆಯುವ ಮರುಬಳಕೆಯ ಪ್ಲಾಸ್ಟಿಕ್ ಮನುಷ್ಯ, ಪ್ರಾಣಿ, ಪಕ್ಷಿ ಸಹಿತ ಸಮಗ್ರ ಪ್ರಕೃತಿಗೆ ಮಾರಕವಾಗುತ್ತಿದೆ. ದೇಶ, ರಾಜ್ಯ, ಸಮಾಜ ಪ್ಲಾಸ್ಟಿಕ್ ಮುಕ್ತವಾಗಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಇನ್ನಷ್ಟು ಸಮಸ್ಯೆಯಾಗಲಿದೆ ಎಂದರು.


ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ನಿಟ್ಟಿನಲ್ಲಿ ವೀಕೆ ಸೊಲ್ಯೂಷನ್ಸ್ ದಿಟ್ಟ ಹೆಜ್ಜೆ ಇಟ್ಟಿದ್ದು ಉದ್ಯಮ ಇನ್ನಷ್ಟು ಉತ್ತಮವಾಗಿ ಬೆಳೆಯಲಿ ಎಂದು ಹಾರೈಸಿದರು.


ಉಜ್ವಲ್ ಗ್ರೂಪ್‌ನ ಎಂ.ಡಿ. ಅಜೇಯ ಪಿ. ಶೆಟ್ಟಿ ಮಾತನಾಡಿ, ಉದ್ಯಮ ಆರಂಭಿಸುವಾಗ ಶ್ರಮ ತುಂಬಾ ಇರಲಿದೆ. ಮೌಲ್ಯಯುತ ಉತ್ಪನ್ನ ನೀಡುವ ಜೊತೆಗೆ ಪರಿಸರ ಸಂರಕ್ಷಣೆಯ ಸುಸ್ಥಿರ ಭವಿಷ್ಯದ ಹಿನ್ನೆಲೆಯಲ್ಲಿ ವೀಕೆ ಸೊಲ್ಯೂಷನ್ಸ್ ಕಲ್ಪನೆಗೆ ಶುಭವಾಗಲಿ ಎಂದರು.


ಸಂಸ್ಥೆಯ ಮಾಲಕರಾದ ವಿದ್ಯಾ ಸರಸ್ವತಿ ಮತ್ತು ಕಾರ್ತಿಕ್ ಶಾಸ್ತ್ರೀ ಸಂಸ್ಥೆಯ ಉದ್ದೇಶ ವಿವರಿಸಿದರು.


ಬಯೋ ಸ್ನೇಹಿ ಅರ್ಥ್ ಕೇರ್‌ ಪ್ರೈ.ಲಿ.ನ ಎಂ.ಡಿ. ಮನೋಹರ ಬಿ.ಎಂ., ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಸ್ಥಾಪಕ ಯು.ವಿಶ್ವನಾಥ ಶೆಣೈ, ಕರ್ನಾಟಕ ಬ್ಯಾಂಕ್‌ನ ಎಜಿಎಂ ರಮೇಶ್ ವೈದ್ಯ, ನಿವೃತ್ತ ಪ್ರಾಂಶುಪಾಲ ಪ್ರೊ.ದಯಾನಂದ ಶೆಟ್ಟಿ, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ಪ್ರಮುಖರಾದ ಸಂಜಯ್ ಕಶ್ಯಪ್, ಜಯಲಕ್ಷ್ಮೀ, ಭುವನ ಪ್ರಸಾದ್ ಹೆಗ್ಡೆ ಮೊದಲಾದವರಿದ್ದರು.