ಯಶಸ್ಸಿಗೆ ಕಠಿಣ ಪರಿಶ್ರಮವೊಂದೇ ರಹದಾರಿ

ಲೋಕಬಂಧು ನ್ಯೂಸ್ | ಉಡುಪಿ, ಜು.4
ಜೀವನದಲ್ಲಿ ಸಾಧನೆಗೆ ಕಠಿಣ ಪರಿಶ್ರಮ ಹಾಗೂ ಇಚ್ಛಾಶಕ್ತಿ ಹೊರತುಪಡಿಸಿದರೆ ಬೇರೆ ಅಡ್ಡದಾರಿಗಳಿಲ್ಲ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಜು.15ರಂದು ದೇಶಾದ್ಯಂತ ವಂದೇ ಮಾತರಂ ಯೋಜನೆಯಡಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಆಯೋಜಿಸುತ್ತಿರುವ `ವಂದೇ ಮಾತರಂ' ಕಾರ್ಯಕ್ರಮ ಅಂಗವಾಗಿ ರಂಗಭೂಮಿ ಉಡುಪಿ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳಿಂದ ಆಯೋಜಿಸಲಾಗುತ್ತಿರುವ ಸ್ವಾತಂತ್ರ್ಯ ಶರಧಿ ನಾಟಕ ಸಿದ್ಧತೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.


ಪದವಿ ಪಡೆಯುವುದೊಂದೇ ವಿದ್ಯಾರ್ಥಿಗಳ ಗುರಿಯಾಗಿರಬಾರದು. ಮಹತ್ತರವನ್ನು ಸಾಧಿಸುವ ಛಲ, ಅದಕ್ಕಾಗಿ ಕಠಿಣ ಪರಿಶ್ರಮ ಹಾಗೂ ಲಭ್ಯ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಮುನ್ನಡೆಯಬೇಕು.


ರಂಗಭೂಮಿ ಉಡುಪಿ ಸಂಸ್ಥೆ ತನ್ನ 61ನೇ ಸಾಧನಾ ಪಥದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ದೇಶ- ವಿದೇಶಗಳ ಗಮನ ಸೆಳೆದಿದೆ. ಈ ಸಾಧನೆಯೇ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಗಮನ ಸೆಳೆದು ನಾಟಕ ಸಿದ್ಧತೆಯ ಜವಾಬ್ದಾರಿ ನೀಡಿದೆ ಎಂದವರು ತಿಳಿಸಿದರು.


ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಡಾ.ಗಾಯತ್ರಿ ಪೈ ಮಾತನಾಡಿ, ಯಾವುದೇ ಕೆಲಸ ಮಾಡುವಾಗ ಇಷ್ಟಪಟ್ಟು ಮಾಡಬೇಕು. ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ಯಶಸ್ಸು ದೊರೆಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ ಸ್ವಾಗತಿಸಿ, ಜು.15ರಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಕಾಳಿದಾಸ ಜಯಂತಿ ಸಂದರ್ಭದಲ್ಲಿ ದೇಶಾದ್ಯಂತ ವಂದೇ ಮಾತರಂ ವಿಚಾರದಲ್ಲಿ ನಾಟಕಗಳನ್ನು ನಡೆಸಲುದ್ದೇಶಿಸಿದೆ. ಕರ್ನಾಟಕದಲ್ಲಿ ಉಡುಪಿ ಮತ್ತು ಬೆಂಗಳೂರಿನಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಉಡುಪಿಯಲ್ಲಿ ನಾಟಕ ಸಿದ್ಧತೆಗೆ ರಂಗಭೂಮಿ ಉಡುಪಿ ಸಂಸ್ಥೆಗೆ ಅವಕಾಶ ನೀಡಿರುವುದು ಉಡುಪಿಗೆ ಹೆಮ್ಮೆಯ ಸಂಗತಿ ಎಂದರು.


ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ, ಉಪಪ್ರಾಂಶುಪಾಲ ವಿಶ್ವನಾಥ್ ಪೈ, ನಾಟಕದ ನಿರ್ದೇಶಕ ಪ್ರಶಾಂತ್ ಉದ್ಯಾವರ ಮೊದಲಾದವರಿದ್ದರು.