ಲೋಕಬಂಧು ನ್ಯೂಸ್ | ಉಡುಪಿ, ಜು.4
ನಗರದ ಹಳೆ ಬಸ್ಸು ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿದ್ದಾತನನ್ನು ಉಡುಪಿ ನಗರ ಠಾಣಾ ಪೊಲೀಸರು ಶನಿವಾರ ಬಂಧಿಸಿದ್ದು, ಬಂಧಿತ ವ್ಯಕ್ತಿ ಬಾಗಲಕೋಟೆ ಮೂಲದ ಕಂಟ್ಯಪ್ಪ ಮೇಟಿ (32) ಎಂದು ತಿಳಿದುಬಂದಿದೆ.
ಖಚಿತ ದೂರಿನ ಹಿನ್ನೆಲೆಯುಲ್ಲಿ ನಗರ ಪೋಲಿಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಸ್ಕೂಟರಿನಲ್ಲಿ ಬಂದಿದ್ದ ವ್ಯಕ್ತಿ ಸಿಟಿ ಬಸ್ಸು ನಿಲ್ದಾಣದಲ್ಲಿ ಮದ್ಯದ ಪೊಟ್ಟಣಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂತು. ಪೋಲಿಸರು ಆತನನ್ನು ವಶಕ್ಕೆ ಪಡೆದುಕೊಂಡು, ತಪಾಸಣೆ ನಡೆಸಿದಾಗ 4 ಲೀಟರ್ ಮದ್ಯ ಪತ್ತೆಯಾಗಿದ್ದು ಆ ಬಗ್ಗೆ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಉಪನಿರೀಕ್ಷಕ ಭರತೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಮುಖ್ಯ ಆರಕ್ಷಕ ಬಶೀರ್ ಭಾಗಿಯಾಗಿದ್ದರು. ಪೋಲಿಸರು ನಾಗರಿಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ಅವರ ಸಹಕಾರ ಪಡೆದಿದ್ದರು.
