ಲೋಕಬಂಧು ನ್ಯೂಸ್ | ಕುಂದಾಪುರ, ಜು.7
ಡಾ.ಶಿವರಾಮ ಕಾರಂತರು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗದೇ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸಿ, ಸಮಾಜಕ್ಕೆ ಅಪಾರ ಕೊಡುಗೆ ನೀಡುವುದರೊಂದಿಗೆ ಬದುಕಿನ ಮೌಲ್ಯಗಳನ್ನು ತಿಳಿಸಿ ಸಾರ್ಥಕ ಬದುಕು ನಡೆಸಿದವರು ಎಂದು ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಹೇಳಿದರು.
ಇಲ್ಲಿನ ಎಚ್.ಎಂ.ಎಂ ಮತ್ತು ವಿ.ಕೆ.ಆಚಾರ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಮಕ್ಕಳಿಗಾಗಿ ಕಾರಂತರು ಕಾರ್ಯಕ್ರಮದಡಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಡಾ.ಕಾರಂತರನ್ನು ಪರಿಚಯಿಸುವ ಚಿತ್ರಕಲೆ ಮೂಲಕ ಕಾರಂತರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬದುಕನ್ನು ರೂಪಿಸಿಕೊಳ್ಳಲು ಪುಸ್ತಕಗಳು ಮಾರ್ಗದರ್ಶಕ. ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ರೂಪಿಸಿಕೊಳ್ಳಬೇಕು. ಎಲ್ಲ ವಿಚಾರಗಳ ಕುರಿತು ಜ್ಞಾನ ಹೊಂದಿರುವುದು ಅತೀ ಅವಶ್ಯಕ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಉಪಪ್ರಾಂಶುಪಾಲೆ ಶುಭ ಕೆ.ಎನ್, ಕಾರಂತರದು ಕನ್ನಡ ಸಾಹಿತ್ಯ ಕಲೆ ಸಂಸ್ಕೃತಿ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಮಹಾನ್ ವ್ಯಕ್ತಿತ್ವ. ವಿದ್ಯಾರ್ಥಿಗಳಿಗೆ ಅವರ ಚಿಂತನೆ ಆದರ್ಶಗಳನ್ನು ಚಿತ್ರದ ಮೂಲಕ ಪರಿಚಯಿಸುವುದು ಅರ್ಥಪೂರ್ಣ ಪ್ರಯತ್ನ ಎಂದರು.
ಚಿತ್ರಕಲಾ ಶಿಕ್ಷಕ ರಮೇಶ್ ಹಾಂಡ ಮಾತನಾಡಿ, ಡಾ.ಶಿವರಾಮ ಕಾರಂತರು ನಾಡು ಕಂಡ ಅಪರೂಪದ ಬಹುಮುಖ ಪ್ರತಿಭೆ. ಮಕ್ಕಳು ಚಿತ್ರಗಳ ಮೂಲಕ ಕಾರಂತರ ಮೌಲ್ಯಗಳನ್ನು ಅರಿಯುವ ಉತ್ತಮ ಅವಕಾಶ. ಕಾರಂತರ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.
ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಡಾ.ಚೇತನ್ ಶೆಟ್ಟಿ ಕೋವಾಡಿ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಟ್ರಸ್ಟ್‌ನ ಸದಸ್ಯ ಡಾ.ಪ್ರಸಾದ್ ರಾವ್ ಸ್ವಾಗತಿಸಿ, ಡಾ.ಭಾರತಿ ಮರವಂತೆ ನಿರೂಪಿಸಿದರು. ಉಪನ್ಯಾಸಕ ಸುರೇಂದ್ರ ವಂದಿಸಿದರು.
