ಅಂಗದಾನಕ್ಕೆ ಹರೆಯದ ಹಂಗಿಲ್ಲ: ಮಹಿಳೆ ಸಾಬೀತು

ಲೋಕಬಂಧು ನ್ಯೂಸ್ ಮಣಿಪಾಲ, ಜು.8
ಜೀವ ಉಳಿಸಲು ವಯಸ್ಸು ಅಡ್ಡಿಯಲ್ಲ ಎಂಬುದನ್ನು ಮಹಿಳೆಯೋರ್ವರು ಸಾಬೀತುಪಡಿಸಿದ್ದು, ಅಂಗಾಂಗ ದಾನ ಯುವ ಜನರಿಗೆ ಮಾತ್ರ ಸೀಮಿತ ಎಂಬ ಸಾಮಾನ್ಯ ಕಲ್ಪನೆಯನ್ನು ಗಂಗೊಳ್ಳಿಯ 76ರ ಹರೆಯದ ಜೆನ್ನಿ ಡಿ'ಸೋಜ ಸುಳ್ಳು ಮಾಡಿ, ಇತರರಿಗೆ ಸ್ಪೂರ್ತಿಯಾಗಿದ್ದಾರೆ.
ಗಂಗೊಳ್ಳಿಯ ಜೆನ್ನಿ ಡಿ'ಸೋಜ ಅವರಿಗೆ ಹಠಾತ್ ತಲೆ ಸುತ್ತು ಕಾಣಿಸಿಕೊಂಡು ಕೆಲವೇ ಗಂಟೆಗಳಲ್ಲಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ ಅವರನ್ನು ತುರ್ತಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿರುವುದು ವೈದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟಿತು.


ಅವರನ್ನು ಉಳಿಸಲು ವೈದ್ಯರ ತಂಡ ಎಲ್ಲಾ ಚಿಕಿತ್ಸಾ ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ. ನಿಗದಿತ ವೈದ್ಯಕೀಯ ಮಾರ್ಗಸೂಚಿಗಳು ಮತ್ತು ಪ್ರೊಟೋಕಾಲ್ ಪ್ರಕಾರ ನಡೆಸಲಾದ ಎಲ್ಲ ಪರೀಕ್ಷೆಗಳ ಬಳಿಕ ಅವರನ್ನು ಮೆದುಳು ನಿಷ್ಕ್ರಿಯಗೊಂಡ ರೋಗಿ ಎಂದು ಅಧಿಕೃತವಾಗಿ ಪ್ರಮಾಣೀಕರಿಸಲಾಯಿತು.


ದುಃಖದ ನಡುವೆ ಜೆನ್ನಿ ಡಿ'ಸೋಜ ಕುಟುಂಬ ಮಾನವೀಯ ಮತ್ತು ಸ್ಫೂರ್ತಿದಾಯಕ ನಿರ್ಧಾರ ಕೈಗೊಂಡು ಅವರ ಯಕೃತ್ (ಲಿವರ್), ಕಣ್ಣು, ಚರ್ಮ ಮೊದಲಾದ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿತು.ಈ ಅಂಗಾಂಗ ದಾನ ಪ್ರಕ್ರಿಯೆ ಕರ್ನಾಟಕ ಸರಕಾರದ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ 'ಜೀವಸಾರ್ಥಕತೆ'ಯ ಸಹಯೋಗದೊಂದಿಗೆ ಯಶಸ್ವಿಯಾಗಿ ನೆರವೇರಿತು.


ಅಂಗಾಂಗ ದಾನಕ್ಕೆ ಸಮ್ಮತಿ ನೀಡಿ ಮಾನವೀಯತೆ ಮೆರೆದ ಕುಟುಂಬಕ್ಕೆ ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಕೃತಜ್ಞತೆ ಸಲ್ಲಿಸಿದ್ದಾರೆ.


ಅಂಗಾಂಗ ದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಲು ಶ್ರಮಿಸಿದ ವೈದ್ಯಕೀಯ ತಂಡ, ಅಂಗಾಂಗ ಕಸಿ ಸಂಯೋಜಕರು, ಸಂಬಂಧಿತ ಸಿಬ್ಬಂದಿಯ ಸೇವೆಯನ್ನು ಆಸ್ಪತ್ರೆ ಪ್ರಶಂಸಿಸಿದೆ.