ಲೋಕಬಂಧು ನ್ಯೂಸ್ | ಉಡುಪಿ, ಜು.13
ಪೊಲೀಸರು ಕಾನೂನು ಚೌಕಟ್ಟಿನಡಿ ಶಿಸ್ತು, ವೃತ್ತಿಪರತೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಪೊಲೀಸರ ನಡವಳಿಕೆ ಸಮಾಜಕ್ಕೆ ಮಾದರಿಯಾಗಿರಬೇಕು ಎಂದು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಹೇಳಿದರು.
ನಗರದ ಡಿಎಆರ್ ಮೈದಾನ (ಚಂದು ಮೈದಾನ)ದಲ್ಲಿ ಉಡುಪಿ ಜಿಲ್ಲಾ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ವತಿಯಿಂದ ಸೋಮವಾರ ಆಯೋಜಿಸಿದ್ದ ಸಶಸ್ತ್ರ ಮೀಸಲು ಪೊಲೀಸ್ ಕಾನ್'ಸ್ಟೇಬಲ್'ಗಳ 14ನೇ ತಂಡದ ನಿರ್ಗಮನ ಪಥಸಂಚಲನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ಸಮವಸ್ತ್ರ ಕೇವಲ ಉಡುಪಲ್ಲ, ಅದು ಪೊಲೀಸ್ ಇಲಾಖೆಯ ಘನತೆ ಹಾಗೂ ಸಾರ್ವಜನಿಕರ ನಂಬಿಕೆಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ಸಿಬ್ಬಂದಿಯ ಸಮವಸ್ತ್ರ ಪರಿಪೂರ್ಣವಾಗಿರಬೇಕು ಎಂದರು.
ಪೊಲೀಸರು ಯಾವುದೇ ಸಮಯ ಹಾಗೂ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲು ಸದಾ ಸಜ್ಜಾಗಿರಬೇಕಾಗಿರುವುದರಿಂದ ಅವರಿಗೆ ಅತ್ಯಂತ ಕಠಿಣ ತರಬೇತಿ ನೀಡಲಾಗುತ್ತದೆ. ಪೊಲೀಸ್ ವ್ಯವಸ್ಥೆಯಲ್ಲಿ ಸಶಸ್ತ್ರ ಮೀಸಲು ಪಡೆ ಪ್ರಮುಖ ಸ್ಥಾನ ಹೊಂದಿದ್ದು ಚುನಾವಣೆ, ಬಂದೋಬಸ್ತ್, ಕೋಮು ಗಲಭೆ ಸೇರಿದಂತೆ ವಿವಿಧ ಸೂಕ್ಷ್ಮ ಸಂದರ್ಭಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಪೊಲೀಸ್ ವೃತ್ತಿಯಲ್ಲಿ ಶ್ರದ್ಧೆ, ವೃತ್ತಿಪರತೆ ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಅತ್ಯಂತ ಮುಖ್ಯವಾಗಿದೆ. ಒತ್ತಡದ ಸಂದರ್ಭಗಳಲ್ಲಿಯೂ ತಾಳ್ಮೆ, ಶಿಸ್ತು ಮತ್ತು ವೃತ್ತಿಪರತೆಯಿಂದ ಕರ್ತವ್ಯ ನಿರ್ವಹಿಸಬೇಕು. ದೈಹಿಕ ಹಾಗೂ ಮಾನಸಿಕ ಸದೃಢತೆ ಕಾಪಾಡಿಕೊಳ್ಳುವ ಮೂಲಕ ಉತ್ತಮ ಸೇವೆ ಸಲ್ಲಿಸಬೇಕು ಎಂದವರು ಕರೆ ನೀಡಿದರು.
ತರಬೇತಿ ಶಾಲೆಯ ಪ್ರಾಂಶುಪಾಲ ಸುಧಾಕರ ನಾಯ್ಕ್ ಮಾತನಾಡಿ, ಈ ತಂಡದಲ್ಲಿ 13 ಮಂದಿ ಮಾಜಿ ಸೈನಿಕರು ಸೇರಿದಂತೆ ಉನ್ನತ ವಿದ್ಯಾರ್ಹತೆ ಹೊಂದಿದ ಒಟ್ಟು 99 ಪ್ರಶಿಕ್ಷಣಾರ್ಥಿಗಳಿದ್ದಾರೆ. 10 ತಿಂಗಳ ತರಬೇತಿ ಅವಧಿಯಲ್ಲಿ ಕಾನೂನು, ಕಂಪ್ಯೂಟರ್, ಮಾನಸಿಕ ಆರೋಗ್ಯ ಸೇರಿದಂತೆ ವಿವಿಧ ವಿಷಯಗಳ ಬೋಧನೆಯೊಂದಿಗೆ ದೈಹಿಕ ಶಿಕ್ಷಣ, ಯೋಗ, ಕರಾಟೆ, ಕವಾಯತು ಹಾಗೂ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತರಬೇತಿ ಅವಧಿಯ ಒಳಾಂಗಣ, ಹೊರಾಂಗಣ ಹಾಗೂ ಫೈರಿಂಗ್ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮೂರು ವಿಭಾಗಗಳಲ್ಲೂ ಅತ್ಯುತ್ತಮ ಸಾಧನೆ ತೋರಿದ ಶಿವಪ್ಪ ಚೆನ್ನಬಸಪ್ಪ ಇಟ್ನಾಳ್ ಅವರಿಗೆ ಸರ್ವಾಂಗೀಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಸ್ವಾಗತಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್. ನಾಯಕ್ ಪ್ರತಿಜ್ಞಾವಿಧಿ ಬೋಧಿಸಿ ವರದಿ ವಾಚಿಸಿ ವಂದಿಸಿದರು. ಎಪಿಸಿ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.

.jpg)
.jpg)
.jpg)
.jpg)
.jpg)
.jpg)