ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ `ಪೇಟಾ' ದಾಳಿ

ಲೋಕಬಂಧು ನ್ಯೂಸ್ | ಬ್ರಹ್ಮಾವರ, ಜು.7
ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ದಾಳಿ ಮಾಡಿದ 'ಪೇಟಾ' ಕಾರ್ಯಕರ್ತರು ಹಾಗೂ ಸ್ಥಳೀಯ ಅಧಿಕಾರಿಗಳ ತಂಡ ಮಂಗಳವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದರು.
ಪ್ರಾಣಿಪ್ರೇಮಿ ಸುಧೀಂದ್ರ ಐತಾಳ್ ನಡೆಸುತ್ತಿರುವ ಈ ಕೇಂದ್ರದಲ್ಲಿ ಅನಾರೋಗ್ಯ ಪೀಡಿತ ಹಾಗೂ ಗಾಯಗೊಂಡ ನಾಯಿ, ಬೆಕ್ಕುಗಳಿಗೆ ಆಶ್ರಯ ನೀಡಲಾಗುತ್ತಿತ್ತು. ಆದರೆ, ಕೇಂದ್ರದಲ್ಲಿ ಸೂಕ್ತ ನಿರ್ವಹಣೆ ಹಾಗೂ ಸ್ವಚ್ಛತೆ ಕೊರತೆ ಇದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಪರಿಶೀಲನಾ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.


ಪೇಟಾ ಕಾರ್ಯಕರ್ತರ ಜೊತೆಗೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಪೌರ ಸಿಬ್ಬಂದಿ, ಆರೋಗ್ಯ ಅಧಿಕಾರಿ ಹಾಗೂ ಕೋಟ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ಕೆಲವು ನಾಯಿ ಮತ್ತು ಬೆಕ್ಕಿನ ಮರಿಗಳನ್ನು ಪೇಟಾ ಸಿಬ್ಬಂದಿಗಳು ರಕ್ಷಣೆ ಮಾಡಿ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.


ಈ ಹಿಂದೆಯೂ ಕೂಡಾ ಇದೇ ಪ್ರಾಣಿ ಸಂರಕ್ಷಣಾ ಕೇಂದ್ರದ ಮೇಲೆ ಪೇಟಾ ದಾಳಿ ನಡೆಸಿ ಹಲವು ಪ್ರಾಣಿಗಳನ್ನು ವಶಕ್ಕೆ ಪಡೆದಿತ್ತು. ಇದೀಗ ಮತ್ತೆ ಕಾರ್ಯಾಚರಣೆ ನಡೆಸಲಾಗಿದೆ.


ಪ್ರಾಣಿ ಸಂರಕ್ಷಣೆಯ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳಲ್ಲಿ ಪ್ರಾಣಿಗಳಿಗೆ ಅಗತ್ಯ ಸೌಲಭ್ಯ, ಸ್ವಚ್ಛತೆ ಹಾಗೂ ಆರೋಗ್ಯ ನಿರ್ವಹಣೆ ಇರಬೇಕು ಎಂಬುದು ಅಧಿಕಾರಿಗಳ  ಸೂಚನೆ.