ಲೋಕಬಂಧು ನ್ಯೂಸ್ | ಉಡುಪಿ, ಜು.13
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆದಿರುವ ಹಗರಣಗಳ ಬಗ್ಗೆ ಅಯೋಧ್ಯಾ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮೌನ ವಹಿಸಿರುವುದು ಏಕೆ? ಈ ಪ್ರಕರಣದಲ್ಲಿ ನಿಮ್ಮ ಪಾತ್ರವೂ ಇದೆಯೇ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪ್ರಶ್ನಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಮ, ಕ್ರೋಧ, ಲೋಭ, ಮೋಹ ತ್ಯಜಿಸಿರುವ ಪೇಜಾವರ ಶ್ರೀಗಳು ರಾಮ ಮಂದಿರ ಹಗರಣದ ಬಗ್ಗೆ ಯಾಕೆ ಬಾಯಿಬಿಡುತ್ತಿಲ್ಲ? ಈ ಪ್ರಕರಣದಲ್ಲಿ ನಿಮ್ಮದು ಪಾತ್ರವಿದೆಯೇ ಎಂಬ ಸಂದೇಹ ಮೂಡುತ್ತಿದೆ ಎಂದರು.
ಕೇಂದ್ರ ನೇರ ಹೊಣೆ
ರಾಮ ಮಂದಿರ ಹಗರಣಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೇರ ಹೊಣೆ ಎಂದ ಉಗ್ರಪ್ಪ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ದೇವಸ್ಥಾನವನ್ನೇ ಲೂಟಿ ಮಾಡಿದವರು ದೇಶವನ್ನು ಲೂಟಿ ಮಾಡದೇ ಬಿಡುತ್ತಾರೆಯೇ ಎಂದು ಟೀಕಿಸಿದರು.
ಬಿಜೆಪಿ, ಆರ್‌ಎಸ್ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ದೇಶವನ್ನು ಲೂಟಿ ಮಾಡುತ್ತಿರುವ ಸಂಘಟನೆಗಳಾಗಿವೆ ಎಂದು ಆರೋಪಿಸಿದ ವಿ.ಎಸ್.ಉಗ್ರಪ್ಪ, ಪೇಜಾವರ ಶ್ರೀಗಳಿಗೆ ನೈತಿಕತೆ ಇದ್ದರೆ ದೇಶದ ಜನತೆಯ ಕ್ಷಮೆ ಯಾಚಿಸಬೇಕು. ಅಲ್ಲದೆ, ರಾಮನ ಮೇಲೆ ಕಿಂಚಿತ್ತಾದರೂ ಗೌರವವಿದ್ದರೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಉಗ್ರಪ್ಪ, ರಾಮ ಮಂದಿರಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ದೇಶದ ಜನರ ಮುಂದಿಡಬೇಕು ಎಂದರು.
