ರೋಟರಿ ಉಡುಪಿ ಪದಗ್ರಹಣ

ಲೋಕಬಂಧು ನ್ಯೂಸ್ | ಉಡುಪಿ, ಜು.7
ರೋಟರಿ ಉಡುಪಿ ಪದಗ್ರಹಣ ಸಮಾರಂಭ ಜುಲೈ 1ರಂದು ನಡೆದಿದ್ದು ನೂತನ ಅಧ್ಯಕ್ಷ ಜೆ. ಗೋಪಾಲಕೃಷ್ಣ ಪ್ರಭು ಹಾಗೂ ಕಾರ್ಯದರ್ಶಿ ಗಣಪತಿ ಪ್ರಭು ಅವರಿಗೆ 2028-29ನೇ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ಅಲೆನ್ ವಿನಯ್ ಲೂಯಿಸ್ ಅವರು ಪದಪ್ರದಾನ ನೆರವೇರಿಸಿ, ಶುಭ ಹಾರೈಸಿದರು.
ವಲಯ 4ರ ನೂತನ ಸಹಾಯಕ ಗವರ್ನರ್ ಹೇಮಂತ್ ಯು.ಕಾಂತ್ ಮತ್ತು ನೂತನ ವಲಯ ಸೇನಾನಿ ದೀಕ್ಷಿತ್ ಶೆಟ್ಟಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ನಿಕಟಪೂರ್ವ ಸಹಾಯಕ ಗವರ್ನರ್ ಅಮಿತ್ ಅರವಿಂದ್, ನಿಕಟಪೂರ್ವ ವಲಯ ಸೇನಾನಿ ಜನಾರ್ದನ ಭಟ್, ನಿಕಟಪೂರ್ವ ಅಧ್ಯಕ್ಷ ಸೂರಜ್ ಕುಮಾರ್, ನಿಕಟಪೂರ್ವ ಕಾರ್ಯದರ್ಶಿ ಅಶೋಕ್ ಕೋಟ್ಯಾನ್ ಹಾಗೂ ನೂತನ ಮೇಜರ್ ಡೋನರ್ ಹೇಮಂತ್ ಯು.ಕಾಂತ್ ಅವರನ್ನು ಸನ್ಮಾನಿಸಲಾಯಿತು.


ಇದೇ ಸಂದರ್ಭದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ 9 ಮಂದಿ ವಿದ್ಯಾರ್ಥಿಗಳಿಗೆ ಧನಸಹಾಯ ಹಾಗೂ ಶ್ರೀಕೃಷ್ಣ ವೃದ್ಧಾಶ್ರಮಕ್ಕೆ ವಿಶೇಷ ಮಂಚವೊಂದನ್ನು ಹಸ್ತಾಂತರಿಸಲಾಯಿತು.


ಕಾರ್ಯದರ್ಶಿ ಗಣಪತಿ ಪ್ರಭು ಸ್ವಾಗತಿಸಿ, ವಂದಿಸಿದರು. ವಿದ್ಯಾ ಶೆಣೈ ಮತ್ತು ರಾಮಚಂದ್ರ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.