ಹಿರಿಯ ಪತ್ರಕರ್ತ ಪರಮಾನಂದ ಸಾಲ್ಯಾನ್ ನಿಧನ

ಲೋಕಬಂಧು ನ್ಯೂಸ್ ಮಂಗಳೂರು, ಜು.14
ಕರಾವಳಿಯ ಪತ್ರಿಕೋದ್ಯಮ, ರಂಗಭೂಮಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ದಶಕಗಳ ಕಾಲ ಗುರುತಿಸಿಕೊಂಡಿದ್ದ ಹಿರಿಯ ಪತ್ರಕರ್ತ, ಸಂಪಾದಕ ಪರಮಾನಂದ ವಿ.ಸಾಲ್ಯಾನ್ ಸಸಿಹಿತ್ಲು (65) ನಿಧನರಾಗಿದ್ದಾರೆ.‘ಮುಂಗಾರು’, ‘ಹೊಸದಿಗಂತ’ ಮೊದಲಾದ ಪ್ರಮುಖ ದಿನಪತ್ರಿಕೆಗಳ ವರದಿಗಾರರಾಗಿದ್ದ ಅವರು ‘ಅಜೇಯ’ ಮಾಸಪತ್ರಿಕೆಯ ಸಂಪಾದಕರಾಗಿದ್ದರು.


ರಂಗಭೂಮಿಯಲ್ಲೂ ತೊಡಗಿಕೊಂಡಿದ್ದ ಪರಮಾನಂದ ಸಾಲ್ಯಾನ್ ಕರಾವಳಿಯಾದ್ಯಂತ ಧೂಳೆಬ್ಬಿಸಿ ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡ ಐತಿಹಾಸಿಕ ‘ಶಿವದೂತ ಗುಳಿಗ’ ತುಳು ನಾಟಕದ ಸಂಭಾಷಣೆಗಾರರಾಗಿ ಅಪಾರ ಜನಪ್ರಿಯತೆ ಗಳಿಸಿದ್ದರು.


‘ರಂಗ ಸುದರ್ಶನ ಸಸಿಹಿತ್ಲು’ ಸಂಸ್ಥೆಯನ್ನು ಕಟ್ಟಿ, ಯುವ ಪ್ರತಿಭೆಗಳಿಗೆ ಆಸರೆಯಾಗಿದ್ದ ಸಮರ್ಥ ರಂಗ ನಿರ್ದೇಶಕರೂ ಆಗಿದ್ದರು.


ಅಕ್ಷರ ಮತ್ತು ರಂಗಕಲೆಯ ಜೊತೆಗೆ ಧಾರ್ಮಿಕ ವಲಯದಲ್ಲೂ ತೊಡಗಿಸಿಕೊಂಡಿದ್ದ ಸಾಲ್ಯಾನ್, ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಮಾಜಿ ಅಧ್ಯಕ್ಷರಾಗಿ ಹಾಗೂ ಶ್ರೀ ಭಗವತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯಲ್ಲಿ ಸಕ್ರಿಯರಾಗಿದ್ದರು.


ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.