ಮನೆಗಳ್ಳತನದ ಈರ್ವರು ಆರೋಪಿಗಳಿಂದ 23 ಲಕ್ಷ ಮೌಲ್ಯದ ಸೊತ್ತು ವಶ

ಲೋಕಬಂಧು ನ್ಯೂಸ್ | ಉಡುಪಿ, ಆ.28
ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಸರಣಿ ಕಳ್ಳತನ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದು, ಅವರಿಂದ ಚಿನ್ನ- ಬೆಳ್ಳಿ ಆಭರಣ, ವಿದೇಶಿ ಕರೆನ್ಸಿ, ನಗದು, ವಾಹನಗಳು ಹಾಗೂ ಮೊಬೈಲ್ ಫೋನ್‌ಗಳು ಸೇರಿದಂತೆ ಒಟ್ಟು 23 ಲಕ್ಷ 56 ಸಾವಿರದ 230 ರೂ.ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಅರುಣ್ ಎಸ್.ವಿ. (43) ಹಾಗೂ ಕೌಶಿಕ್ (19) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೆರಂಪಳ್ಳಿ ಸಂತೋಷ ನಗರದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.


ಆರೋಪಿಗಳಿಂದ ಸುಮಾರು ರೂ.2 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಮತ್ತು ನೋಟುಗಳು, 1.360 ಕಿ.ಗ್ರಾಂ ಬೆಳ್ಳಿ ಆಭರಣ, 22 ಸಾವಿರದ 500 ರೂ. ಮೌಲ್ಯದ 1.45 ಗ್ರಾಂ ಚಿನ್ನದ ನಾಣ್ಯಗಳು, 13 ಲಕ್ಷದ 26 ಸಾವಿರ‌ ರೂ. ಮೌಲ್ಯದ 88.400 ಗ್ರಾಂ ಚಿನ್ನ, 30 ಸಾವಿರ ರೂ.ಮೌಲ್ಯದ ನಗದು, ರೂ.4 ಲಕ್ಷ ಮೌಲ್ಯದ ಆಟೋರಿಕ್ಷಾ, 13 ಸಾವಿರ ರೂ‌. ಮೌಲ್ಯದ ಎರಡು ಮೊಬೈಲ್ ಫೋನ್‌ಗಳು, ಕೃತ್ಯಕ್ಕೆ ಬಳಸಿದ್ದ 45 ಸಾವಿರ ರೂ. ಮೌಲ್ಯದ ಕಳ್ಳತನದ ಪಲ್ಸರ್ ಬೈಕ್ ಹಾಗೂ 30 ಸಾವಿರ ರೂ ಮೌಲ್ಯದ ವಿದೇಶಿ ಕೈಗಡಿಯಾರ ವಶಪಡಿಸಿಕೊಳ್ಳಲಾಗಿದೆ.


ಆರೋಪಿಗಳು ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಂಡು ಕಳ್ಳತನ ಮಾಡಿದ್ದ ಪಲ್ಸರ್ ಬೈಕ್'ನಲ್ಲಿ ತೆರಳಿ ಬಾಗಿಲು ಮುರಿದು ಕಳವು ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಉಡುಪಿ ನಗರ ಮತ್ತು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಐದು ಕಳ್ಳತನ ಪ್ರಕರಣಗಳಲ್ಲಿ ಇವರಿಬ್ಬರು ಭಾಗಿಯಾಗಿರುವುದು ತನಿಖೆಯಿಂದ ದೃಢಪಟ್ಟಿದೆ.


ಉಡುಪಿ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ಪೈಕಿ ಕೊಡಂಕೂರು ಗ್ರಾಮದ ಶಶಿರೇಖಾ ಮನೆಯಲ್ಲಿ ನಡೆದ ಕಳ್ಳತನ ಮತ್ತು ಪುತ್ತೂರು ಗ್ರಾಮದ ಭಗವತಿ ಲೇಔಟ್'ನ ಸನಂ ಅವರ ಮನೆಯಲ್ಲಿ ನಡೆದ ಕಳ್ಳತನ ಸೇರಿವೆ. ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನೇಜಾರು ಮಸೀದಿ ಬಳಿಯ ಗ್ಯಾರೇಜಿನಿಂದ ಸಂದೇಶ್ ಅವರ ಪಲ್ಸರ್ ಬೈಕ್ ಕಳ್ಳತನ, ಕೆಳಾರ್ಕಳಬೆಟ್ಟು ನಿವಾಸಿ ತೃಪ್ತಿ ಅವಿನಾಶ್ ಅವರ ಮನೆಯಲ್ಲಿ ನಡೆದ ಕಳ್ಳತನ ಮತ್ತು ಅದೇ ಪ್ರದೇಶದ ರವಿ ಉಪಾಧ್ಯ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಗಳು ಸೇರಿವೆ.


ಆರೋಪಿಗಳ ಬಂಧನಕ್ಕೆ ಕಾರಣವಾದ ಪ್ರಕರಣದಲ್ಲಿ ದುಬೈಯಿಂದ ಊರಿಗೆ ಬಂದಿದ್ದ ಸನಂ (39) ಅವರು ಆ. 8ರಂದು ಸಂಬಂಧಿಕರ ಮನೆಗೆ ತೆರಳಿದ್ದರು. ಆ. 11ರಂದು ಬೆಳಗ್ಗೆ 11.30ರ ಸುಮಾರಿಗೆ ಮನೆಗೆ ವಾಪಸಾದಾಗ, ಮನೆಯ ಟೆರೇಸ್ ಬಾಗಿಲನ್ನು ಆಯುಧದಿಂದ ಬಲವಂತವಾಗಿ ತೆರೆಯಲಾಗಿರುವುದು ಕಂಡುಬಂದಿತ್ತು. ಮನೆಯ ಕೋಣೆಯಲ್ಲಿದ್ದ ಕಪಾಟಿನ ಡ್ರಾವರ' ನಲ್ಲಿದ್ದ 10,000 ಎಇಡಿ ದಿರ್ಹಾಮ್ ಹಾಗೂ 14 ಸಾವಿರ ನಗದು, ಒಟ್ಟು ಸುಮಾರು 2.14 ಲಕ್ಷ ಮೌಲ್ಯದ ಹಣ ಕಳವಾಗಿರುವುದು ಪತ್ತೆಯಾಗಿತ್ತು.


ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಪ್ರಮುಖ ಆರೋಪಿ ಅರುಣ್ ಆಚಾರಿ ಈ ಹಿಂದೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣದಲ್ಲಿ ಒಂಬತ್ತು ವರ್ಷಗಳ ಕಾರಾಗೃಹ ಶಿಕ್ಷೆ ಅನುಭವಿಸಿ  2025ರ ಜುಲೈನಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೆ ಕಳ್ಳತನ ಪ್ರಕರಣಗಳಲ್ಲಿ ತೊಡಗಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.