ಸೆ.4,5: ಜಗದೊಡೆಯ ಶ್ರೀಕೃಷ್ಣನ ಜನ್ಮಾಷ್ಟಮಿ ಸಂಭ್ರಮ‌

ಲೋಕಬಂಧು ನ್ಯೂಸ್ | ಉಡುಪಿ, ಆ.27
ಪರ್ಯಾಯ ಶೀರೂರು ಶ್ರೀಕೃಷ್ಣಮಠ ವತಿಯಿಂದ ಜಗದೊಡೆಯ ಶ್ರೀಕೃಷ್ಣನ ಜನ್ಮಾಷ್ಟಮಿ ಅಂಗವಾಗಿ ಮಾಸ ಪೂರ್ತಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾಳಜಿಯ ಕಾರ್ಯಕ್ರಮ ಆಯೋಜಿಸಲಾಗಿದೆ. ಸೆಪ್ಟೆಂಬರ್ 4ರಿಂದ 6ರ ವರೆಗೆ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ.4ರ ರಾತ್ರಿ 12.12ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ನಡೆಯಲಿದ್ದು, ಸೆ.5ರಂದು ಬೆಳಗ್ಗೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ. ಇದೇ ಸಂದರ್ಭದಲ್ಲಿ ರಾಜಾಂಗಣದಲ್ಲಿ ಹುಲಿವೇಷ ಕುಣಿತ ಸೇರಿದಂತೆ ವಿವಿಧ ಸ್ಪರ್ಧೆಗಳು, ಅಪರಾಹ್ನ 3.30ಕ್ಕೆ ವಿಟ್ಲಪಿಂಡಿ ಶ್ರೀಕೃಷ್ಣ ಲೀಲೋತ್ಸವ ಅಂಗವಾಗಿ ರಥಬೀದಿಯಲ್ಲಿ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃಣ್ಮಯ ಮೂರ್ತಿಯ ಮೆರವಣಿಗೆ ನಡೆಯಲಿದೆ. ಶೀರೂರು ಮಠದ ಎದುರಿನ ವಿಶೇಷ ವೇದಿಕೆಯಲ್ಲಿ ಆಹ್ವಾನಿತ ಮಲ್ಲಯುದ್ಧ ಪ್ರವೀಣರಿಂದ ಪ್ರದರ್ಶನ  ಆಯೋಜಿಸಲಾಗಿದೆ.


ಸೆ.6ರಂದು ಸಂಜೆ 5ರಿಂದ ರಾಜಾಂಗಣದಲ್ಲಿ ಜನ್ಮಾಷ್ಟಮಿ ಸಂಭ್ರಮ ಸಮಾರೋಪ. ಬಹುಮಾನ ವಿತರಣೆ ನಡೆಯಲಿದೆ. ಶ್ರೀಕೃಷ್ಣನ ಜನ್ಮಾಷ್ಟಮಿ ಸಂಭ್ರಮದ ಸಮಾರೋಪ ಸಮಾರಂಭ ನಡೆಯಲಿದೆ. ಅಷ್ಟಮಂಗಲ ಪ್ರಶ್ನೆಯ ಅನುಸಾರದಂತೆ ಸೆ.6ರಂದು ಕೋಟಿ ತುಳಸಿ ಅರ್ಚನೆ ನಡೆಯಲಿದೆ ಎಂದು ಶೀರೂರು ಶ್ರೀಗಳು ತಿಳಿಸಿದರು.


ಜನ್ಮಾಷ್ಟಮಿ ಪರ್ವಕಾಲದಲ್ಲಿ ಅಂತರರಾಷ್ಟ್ರೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸೆ.4, 5ರಂದು ಹುಲಿವೇಷ ಸ್ಪರ್ಧೆ ಆಯೋಜಿಸಲಾಗಿದೆ. ಸೆ.4ರಂದು ಮುದ್ದುಕೃಷ್ಣ ಸ್ಪರ್ಧೆ, ಸೆ.5ರಂದು ಶ್ರಾವಣ ಶನಿವಾರ ಹಿನ್ನೆಲೆಯಲ್ಲಿ ಭೋಜನಶಾಲೆಯಲ್ಲಿ ನೆಲದೂಟ ವಿಶೇಷವಾಗಿದ್ದು, ಬೆಳಿಗ್ಗೆ 9.30ಕ್ಕೆ ಶೀರೂರು ಶ್ರೀಪಾದರಿಂದ ಪಲ್ಲಪೂಜೆ ಬಳಿಕ ಅನ್ನಪ್ರಸಾದ ವಿತರಣೆಯಾಗಲಿದೆ. ಶ್ರೀಕೃಷ್ಣಮಠ ಹಾಗೂ ರಥಬೀದಿ ಪರಿಸರದ ಸ್ವಚ್ಛತೆ ಜೊತೆಗೆ ಜನರಿಗೆ ಅನುಕೂಲತೆ ಕಲ್ಪಿಸಲುದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಭಕ್ತರ ಅನುಕೂಲಕ್ಕಾಗಿ ರಥಬೀದಿ- ರಾಜಾಂಗಣ ಸಂಪರ್ಕ ಹಾದಿಯಲ್ಲಿ ನಿರ್ಮಿಸಿದ ಚಪ್ಪಲಿ ಸ್ಟಾಂಡ್, ನೂತನ ಶೌಚಾಲಯ ಉದ್ಘಾಟಿಸಲಾಗುವುದು.


ಅಲಂಕಾರ ಪ್ರಿಯ ಶ್ರೀಕೃಷ್ಣನಿಗೆ ಪರ್ಯಾಯ ಶೀರೂರು ಶ್ರೀಪಾದರಿಂದ ದಶಾವತಾರ ಹಾಗೂ ಕೃಷ್ಣಲೀಲೆ ಪರಿಕಲ್ಪನೆಯಡಿ ನಿತ್ಯ ವಿವಿಧ ಅಲಂಕಾರ ಮಾಡಲಾಗುತ್ತಿದೆ ಎಂದು ಮಠದ ದಿವಾನ ಡಾ.ಉದಯ ಕುಮಾರ್ ಸರಳತ್ತಾಯ ತಿಳಿಸಿದರು.


ದೇಶಕ್ಕೆ ದೋಷ: ಭಕ್ತರ ಸಹಯೋಗದಲ್ಲಿ ಪರಿಹಾರ
ದೇಶವನ್ನು ಕಾಡುವ ಕಾಳಸರ್ಪ ಯೋಗಕ್ಕೆ ಪರಿಹಾರದ ಭಾಗವಾಗಿ ಅಷ್ಟಮಂಗಲ ಪ್ರಶ್ನೆಯಲ್ಲಿ ಸೂಚಿಸಿದಂತೆ ಡಿಸೆಂಬರ್ ತಿಂಗಳೊಳಗೆ 18 ಕೋಟಿ ರಾಮಜಪ, ಒಂದು ಕೋಟಿ ಕೃಷ್ಣಜಪ ಹಾಗೂ ಒಂದು ಲಕ್ಷ ವಿಷ್ಣುಸಹಸ್ರನಾಮ ಜಪ ಮಾಡಲಾಗುವುದು. ಶ್ರೀಕೃಷ್ಣಮಠಕ್ಕೆ ಸಂಬಂಧಿಸಿ ಕಂಡುಬಂದ ಸಮಸ್ಯೆಗಳಿಗೆ ಅಷ್ಟಮಠಗಳ ಸಹಯೋಗದೊಂದಿಗೆ ಪರಿಹಾರ ರೂಪಿಸಲಾಗುವುದು ಎಂದು ದಿವಾನ ಡಾ.ಉದಯಕುಮಾರ್ ಸರಳತ್ತಾಯ ತಿಳಿಸಿದರು.


ವಿವಿಧ ಯೋಜನೆ
ವಸಂತ ಮಂಟಪದಲ್ಲಿರುವ ಮಧ್ವ ಮೂರ್ತಿಗೆ 3 ಕೋ. ರೂ. ವೆಚ್ಚದಲ್ಲಿ ಬೆಳ್ಳಿ ಕವಚ
ಹಾಲು ಕಾಯಿಸುವ ಕೋಣೆ (10 ಲಕ್ಷ ರೂ.), ತರಕಾರಿ ಕಟ್ಟಿಂಗ್, ಕಟ್ಟಿಗೆ ಕಟ್ಟಿಂಗ್, ಗ್ರೈಂಡಿಂಗ್ ಮೆಷಿನ್ ತಲಾ 2 ಲಕ್ಷ ರೂ.
ಸರತಿ ವ್ಯವಸ್ಥೆ: 50 ಲಕ್ಷ ರೂ., ಬಯೊಗ್ಯಾಸ್: 65 ಲಕ್ಷ ರೂ.
ವಯರಿಂಗ್: 24 ಲಕ್ಷ ರೂ., ಬಯೊಮೆಟ್ರಿಕ್ ಸರದಿ: 5 ಲಕ್ಷ ರೂ.
ಬಡಗುಮಾಳಿಗೆ ಕಚೇರಿ ನವೀಕರಣ: 15 ಲಕ್ಷ ರೂ.
ಉಚಿತ ಶೌಚಾಲಯ/ ಸ್ನಾನಗೃಹ: 75 ಲಕ್ಷ ರೂ.
ಬ್ರಹ್ಮರಥಕ್ಕೆ 4 ಚಕ್ರ ಸಹಿತ ಸ್ಟೇರಿಂಗ್, ಸಇಸಿಟಿವಿ: 20 ಲಕ್ಷ ರೂ.
ಹೊಸ ಬಾಯ್ಲರ್ ಅಳವಡಿಕೆ: 22 ಲಕ್ಷ ರೂ.
ಅನ್ನದಾನ: 5.25 ಕೋ. ರೂ., ವೇದ ಪಾರಾಯಣ: 2.5 ಕೋ.
ವಿದ್ವಾಂಸರಿಗೆ ಗೌರವಧನ: 52 ಲಕ್ಷ ರೂ, ಸಾಂಸ್ಕೃತಿಕ ಕಾರ್ಯಕ್ರಮ: 50 ಲಕ್ಷ