ಮೃತ ವ್ಯಕ್ತಿಯ ಹೆಸರಿನಲ್ಲಿ 5 ಲಕ್ಷ ರೂ. ವಸೂಲಿಗೆ ಯತ್ನ: ಇಬ್ಬರ ಬಂಧನ

ಲೋಕಬಂಧು ನ್ಯೂಸ್ | ಉಡುಪಿ, ಆ.27
ಸುಮಾರು ಎಂಟು ವರ್ಷದ ಹಿಂದೆ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ 5 ಲಕ್ಷ ರೂ. ಬಾಕಿ ಹಣ ನೀಡುವಂತೆ ಕುಟುಂಬಿಕರಿಗೆ ಬೆದರಿಕೆಯೊಡ್ಡಿ ಹಣ ವಸೂಲಿಗೆ ಯತ್ನಿಸಿದ ಆರೋಪದಲ್ಲಿ ಇಬ್ಬರನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಉಡುಪಿ ಕುಕ್ಕುಂಜೆ ಸಂತೋಷ ನಗರದ ಸಾಜೀದ್ ಹಾಗೂ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೆಂಪನಳ್ಳಿ ನಿವಾಸಿ ಸೈಯದ್ ಸೈಫ್ ಅಹಮ್ಮದ್ (40) ಎಂದು ಗುರುತಿಸಲಾಗಿದೆ.
ಜುಲೈ 2ರಂದು ದೂರುದಾರ ಅಶೋಕ್ ಪಡಿಯಾರ್ ಎಂಬವರಿಗೆ ವಾಟ್ಸಾಪ್ ಮೂಲಕ ಕರೆ ಮಾಡಿದ ವ್ಯಕ್ತಿಯೊಬ್ಬ ಹಿಂದಿಯಲ್ಲಿ ಮಾತನಾಡಿ, ನಿಮ್ಮ ಮಗ ಅಜಿತ್ ಪಡಿಯಾರ್ ನಮ್ಮೊಂದಿಗೆ ವಜ್ರದ ವ್ಯವಹಾರ ನಡೆಸಿದ್ದು 5 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದಾರೆ. ಕೂಡಲೇ ಹಣ ಪಾವತಿಸಬೇಕು ಎಂದು ಒತ್ತಾಯಿಸಿದ್ದ ಎನ್ನಲಾಗಿದೆ.


ಆದರೆ, ಅಜಿತ್ ಅವರು ಎಂಟು ವರ್ಷದ ಹಿಂದೆಯೇ ಮೃತಪಟ್ಟಿದ್ದು ವಜ್ರದ ವ್ಯವಹಾರದ ಬಗ್ಗೆ ಕುಟುಂಬಿಕರಿಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರೂ ಆರೋಪಿಗಳು ಹಣ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಬಳಿಕ ದುಬೈಯಲ್ಲಿದ್ದ ಅಜಿತ್ ಅವರ ಪುತ್ರ ಅಮಿತ್ ಅವರಿಗೂ ವಾಟ್ಸಾಪ್ ಮೂಲಕ ಕರೆ ಮಾಡಿ 5 ಲಕ್ಷ ಬಾಕಿ ಹಣ ಪಾವತಿಸದಿದ್ದರೆ ಊರಿನಲ್ಲಿರುವ ಅವರ ಪತ್ನಿ ರಕ್ಷಾ ಅವರಿಗೆ ತೊಂದರೆ ನೀಡುವುದಾಗಿ ಬೆದರಿಕೆ ಹಾಕಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು.


ಆರೋಪಿಗಳ ಪತ್ತೆಗಾಗಿ ಉಡುಪಿ ನಗರ ಠಾಣೆ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಪಿ. ಮಾರ್ಗದರ್ಶನದಲ್ಲಿ ತನಿಖಾ ಪಿಎಸ್ಐ ರತ್ನಾಕರ ಕೆ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತನಿಖೆ ನಡೆಸಿದ ತಂಡ ಜುಲೈ 20ರಂದು ಸಾಜೀದ್'ನನ್ನು ಹಾಗೂ ಆ.26ರಂದು ಸೈಯದ್ ಸೈಫ್ ಅಹಮ್ಮದ್'ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.


ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಸೈಯದ್ ಸೈಫ್ ಅಹಮ್ಮದ್'ನನ್ನು ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸಲಾಗುತ್ತಿದೆ.