ಆ.25: ದ.ಕ., ಉಡುಪಿ ಜಿಲ್ಲೆಗಳಲ್ಲಿ ಈದ್ ರಜೆ

ಲೋಕಬಂಧು ನ್ಯೂಸ್ ಮಂಗಳೂರು, ಆ.24
ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್ 25 ರಂದು ಮಂಗಳವಾರ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.ಈ ಬಗ್ಗೆ ಸರ್ಕಾರದ ಸಿಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ. ಈದ್ ಮಿಲಾದ್‌ ಹಬ್ಬವನ್ನು ಆ.25ರಂದು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳು ಹಾಗೂ ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಅನ್ವಯವಾಗಲಿದೆ.


ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಉಡುಪಿ ಜಿಲ್ಲಾಧಿಕಾರಿಗಳ ಮನವಿಯನ್ನು ಪರಿಗಣಿಸಿ ನಿಯಮಾನುಸಾರ ರಜೆ ಘೋಷಿಸುವಂತೆ ಕೋರಲಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಎನ್.ಆರ್. ಅವರು ಆದೇಶ ಹೊರಡಿಸಿದ್ದಾರೆ. ಆದೇಶ ಈಗಾಗಲೇ ಪೂರ್ವನಿಗದಿತ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪರೀಕ್ಷೆಗಳಿಗೆ ಅನ್ವಯಿಸುವುದಿಲ್ಲ.


ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ಕರ್ನಾಟಕ ರಾಜ್ಯಾದ್ಯಂತ ಆ.26ರಂದು ಸಾರ್ವತ್ರಿಕ ರಜೆ ಅನ್ವಯವಾಗಲಿದೆ.


ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಆ.25ರಂದೇ ಈದ್ ಮಿಲಾದ್ ಆಚರಿಸಲು ಮುಸ್ಲಿಂ ಧಾರ್ಮಿಕ ನಾಯಕರು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಮಂಗಳವಾರವೇ ರಜೆ ಘೋಷಿಸುವಂತೆ ರಾಜ್ಯ ಆರೋಗ್ಯ ಖಾತೆ ಸಚಿವ ಯು.ಟಿ.ಖಾದರ್ ಸರ್ಕಾರವನ್ನು ಕೋರಿದ್ದರು.