ಲೋಕಬಂಧು ನ್ಯೂಸ್ | ಉಡುಪಿ, ಆ.12
ಮುದರಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿ'ಸೋಜಾ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಮತ್ತೀರ್ವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕೃತ್ಯಕ್ಕೆ ಹಣ ವರ್ಗಾವಣೆ ಮಾಡಲು ಸಹಾಯ ಮಾಡಿ ಆರೋಪಿಗಳಿಗೆ ಸಹಕರಿಸಿದ ಆರೋಪದಲ್ಲಿ ಎರ್ಮಾಳ್'ನವರಾದ ಚಿರಾಗ್ ಪೂಜಾರಿ (26) ಮತ್ತು ಮೊಹಮ್ಮದ್ ಇರ್ಷಾದ್ (43) ಎಂಬವರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಮೋಟಾರ್ ಸೈಕಲ್'ನಲ್ಲಿ ಬಂದ ಆರೋಪಿಗಳ ಪೈಕಿ ಸಹ ಸವಾರ ಪಿಸ್ತೂಲ್'ನಿಂದ ಡೇವಿಡ್ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ್ದು, ಹೆಚ್ಚಿನ ತನಿಖೆ ವೇಳೆ ಮತ್ತೂ ಈರ್ವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
