ಕ್ರಿಕೆಟ್ ಬೆಟ್ಟಿಂಗ್ ಸಿಇಓ ಆತ್ಮಹತ್ಯೆಗೆ ಕಾರಣ?

ಲೋಕಬಂಧು ನ್ಯೂಸ್ | ಉಡುಪಿ, ಆ.11
ಕಲ್ಪನಾ ಟಾಕೀಸ್ ಬಳಿಯ ಸಾಯಿರಾಜ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕ್ರಿಕೆಟ್ ಬೆಟ್ಟಿಂಗ್'ಲ್ಲಿ ಕೋಟ್ಯಂತರ ರೂ. ನಷ್ಟವಾಗಿರುವುದು ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಸೊಸೈಟಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಚಿನ್, ಸೋಮವಾರ ಆತ್ಮಹತ್ಯೆಗೂ ಮುನ್ನ ಏಳು ಪುಟಗಳ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಕ್ರಿಕೆಟ್ ಬೆಟ್ಟಿಂಗ್'ಲ್ಲಿ ಭಾರೀ ಮೊತ್ತದ ಹಣ ಕಳೆದುಕೊಂಡಿದ್ದ ಅವರು, ಸ್ನೇಹಿತರಿಂದ ಸಾಲ ಪಡೆದಿದ್ದರು. ಸಾಲ ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿರುವುದಾಗಿ ಡೆತ್ ನೋಟ್'ನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


ಜೊತೆಗೆ ತಾವು ಕಾರ್ಯನಿರ್ವಹಿಸುತ್ತಿದ್ದ ಸೊಸೈಟಿಯ ನಾಲ್ವರು ನಿರ್ದೇಶಕರು ರಾಜೀನಾಮೆ ನೀಡಿದ್ದರಿಂದ ಗ್ರಾಹಕರು ಠೇವಣಿ ಹಣ ಹಿಂಪಡೆಯಲು ಸೊಸೈಟಿಗೆ ಬರುತ್ತಿದ್ದರು. ಈ ಬೆಳವಣಿಗೆಯಿಂದಲೂ ಸಚಿನ್ ಮಾನಸಿಕವಾಗಿ ನೊಂದಿದ್ದರು ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.