ಸಿಎಂ ಪೀಠಕ್ಕೆ ಡಿಕೆಶಿ ನಮನ!

ಲೋಕಬಂಧು ನ್ಯೂಸ್ ಬೆಂಗಳೂರು, ಆ.13
ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಗುರುವಾರದಿಂದ ಆರಂಭವಾಗಿದ್ದು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಅಧಿವೇಶನದಲ್ಲಿ ಭಾಗವಹಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರು ಸದನವನ್ನು ಪ್ರವೇಶಿಸುವಾಗ ವಿಧಾನಸಭೆಯ ಹೊಸ್ತಿಲಿಗೆ ಮತ್ತು ಸಿಎಂ ಪೀಠಕ್ಕೆ ಶಿರಬಾಗಿ ನಮಸ್ಕರಿಸಿದರು.'ಕೋಟ್ಯಂತರ ಕನ್ನಡಿಗರ ಆಶೀರ್ವಾದದೊಂದಿಗೆ ಪ್ರಜಾಪ್ರಭುತ್ವದ ಆಶಯಕ್ಕೆ ಶಿರಬಾಗಿ ಸದನಕ್ಕೆ ಮುಖ್ಯಮಂತ್ರಿಯಾಗಿ ನನ್ನ ಮೊದಲ ಹೆಜ್ಜೆ ಎಂದು ಡಿ.ಕೆ. ಶಿವಕುಮಾರ್ ಅವರು ಎಕ್ಸ್‌ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.ಸಿಎಂ ಶಿವಕುಮಾರ್ ಅವರು ವಿರೋಧ ಪಕ್ಷದ ಬೆಂಚುಗಳತ್ತ ನಡೆದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಅವರನ್ನು ದಿನದ ಕಲಾಪದ ಆರಂಭದಲ್ಲಿ ಸ್ವಾಗತಿಸಿದರು.


ಮೇ 28ರಂದು ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಜೂನ್ 3ರಂದು ಡಿ.ಕೆ.ಶಿವಕುಮಾರ್ 13 ಮಂದಿ ಸಚಿವರೊಂದಿಗೆ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.


ಆ. 3ರಂದು ಮತ್ತೆ 19 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಸಚಿವ ಸಂಪುಟವನ್ನು ವಿಸ್ತರಿಸಿದರು. ಇದೀಗ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದ ಸಚಿವರ ಸಂಖ್ಯೆ 33ಕ್ಕೆ ತಲುಪಿದ್ದು, ಇನ್ನೂ ಒಂದು ಸ್ಥಾನ ಖಾಲಿ ಉಳಿದಿದೆ.


ವಿಪಕ್ಷ ಸಹಕಾರ ಕೋರಿದ ಡಿಕೆಶಿ
ವಿರೋಧ ಪಕ್ಷದ ನಾಯಕರು ಕುಳಿತುಕೊಂಡ ಸಾಲಿಗೆ ಸ್ವತಃ ಸಿಎಂ ಡಿ.ಕೆ. ಶಿವಕುಮಾರ್ ಆಗಮಿಸಿ ಕೈಕುಲುಕಿ ಸಹಕಾರ ಕೋರಿದರು. ವಿಧಾನಸಭೆ ಅಧಿವೇಶನದ ಆರಂಭದ ದಿನವೇ ವಿಪಕ್ಷಗಳ ಸಹಕಾರ ಕೇಳುವ ಮೂಲಕ ಗಮನ ಸೆಳೆದರು.


ಸಿಎಂ ಡಿ.ಕೆ. ಶಿವಕುಮಾರ್ ಅವರ ಸದನ ನಮನದ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಇದು ಪಿಎಂ ಮೋದಿ ಅನುಕರಣೆ ಎಂಬ ಮಾತೂ ಕೇಳಿಬರುತ್ತಿದೆ.