ಸಾಂವಿಧಾನಿಕ ನೈತಿಕತೆಯಿಂದ ಸಮಾನತೆ

ಲೋಕಬಂಧು ನ್ಯೂಸ್ | ಉಡುಪಿ, ಆ.27
ಧರ್ಮಾಧಾರಿತ ನೈತಿಕತೆಗಿಂತ ಸಾಂವಿಧಾನಿಕ ನೈತಿಕತೆ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸಮಾನತೆ ಸಾಧಿಸಲು ಸಾಧ್ಯ ಎಂದು ಎಸ್ಆರ್.ಎಸ್.ಎಂ.ಎನ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಪ್ರಸಾದ್ ರಾವ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ.ಜಿ.ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಸಹಯೋಗದಲ್ಲಿ ನಡೆದ 'ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು' ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


ಅಂಬೇಡ್ಕರ್ ವಿಚಾರಧಾರೆ ಹಾಗೂ ಬದುಕನ್ನು ಅಧ್ಯಯನ ಮಾಡುವುದರಿಂದ ಸ್ವಾತಂತ್ರ್ಯ ಮತ್ತು ಜವಾಬ್ದಾರಿಯ ಅರಿವು ಬೆಳೆಸಿಕೊಳ್ಳಬಹುದು. ಅವರ ಚಿಂತನೆಗಳನ್ನು ಅಳವಡಿಸಿಕೊಂಡು ವೈಯಕ್ತಿಕ ಆಶೋತ್ತರಗಳನ್ನು ಈಡೇರಿಸಿಕೊಳ್ಳುವ ಜೊತೆಗೆ ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು ಎಂದರು.


ವಿದ್ಯಾರ್ಥಿಗಳು ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಮೂರು ರೀತಿಯಲ್ಲಿ ಓದುವ ಮೂಲಕ ಅವರ ವಿಚಾರಧಾರೆ ಹಾಗೂ ಅಧ್ಯಯನದ ಆಳವನ್ನು ಅರಿತುಕೊಳ್ಳಬೇಕು. ಅಂಬೇಡ್ಕರ್ ಏನನ್ನು ಓದಿದ್ದರು ಎಂಬುದನ್ನು ತಿಳಿದುಕೊಂಡು ಅವರ ಅಧ್ಯಯನದ ವ್ಯಾಪ್ತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.


ಮರಾಠಿ ಭಾಷಿಕರಾಗಿದ್ದ ಅಂಬೇಡ್ಕರ್ ಸಂಸ್ಕೃತ, ಪಾಲಿ, ಹಿಂದಿ, ಜರ್ಮನ್, ಇಂಗ್ಲಿಷ್ ಹಾಗೂ ಫ್ರೆಂಚ್ ಸೇರಿದಂತೆ ಹಲವು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಅಪಾರ ಓದುಗರಾಗಿದ್ದ ಅವರು ಸುಮಾರು 50 ಸಾವಿರ ಪುಸ್ತಕಗಳನ್ನು ಓದಿ, ಅವುಗಳ ಕುರಿತು ಟಿಪ್ಪಣಿ ಬರೆದಿದ್ದರು.


ಅಂಬೇಡ್ಕರ್ ಅವರು ಮಹಾತ್ಮ ಗಾಂಧೀಜಿ, ವಿನಾಯಕ ದಾಮೋದರ ಸಾವರ್ಕರ್ ಹಾಗೂ ಡಬ್ಲ್ಯೂ.ಇ.ಬಿ.ಡು ಬಾಯ್ಸ್ ಅವರಿಗೆ ಬರೆದ ಪತ್ರಗಳನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು. ಅವರು ರಚಿಸಿದ 'ಜಾತಿ ವಿನಾಶ' ಕೃತಿಯ ಅಧ್ಯಯನ ನಮ್ಮ ಚಿಂತನಾ ಕ್ರಮವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದೆ ಎಂದರು.


ಕವಿ ಸಿದ್ದಲಿಂಗಯ್ಯ ಅವರು ಅಂಬೇಡ್ಕರ್ ಕುರಿತು ಬರೆದಿರುವ ಕೃತಿಗಳನ್ನೂ ವಿದ್ಯಾರ್ಥಿಗಳು ಓದಬೇಕು. ಅಂತರ್ಜಾಲದಲ್ಲಿ ಲಭ್ಯವಿರುವ ವಿಶ್ವಾಸಾರ್ಹ ಮಾಹಿತಿಗಳನ್ನು ಅಧ್ಯಯನ ಮಾಡುವ ಮೂಲಕ ಅಂಬೇಡ್ಕರ್ ವಿಚಾರಗಳನ್ನು ಮತ್ತಷ್ಟು ಆಳವಾಗಿ ತಿಳಿದುಕೊಳ್ಳಬೇಕು ಎಂದು ಡಾ.ಪ್ರಸಾದ್ ರಾವ್ ಸಲಹೆ ನೀಡಿದರು.


ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ, ಅಂಬೇಡ್ಕರ್ ಅವರ ಮೌಲ್ಯಗಳು ಸಾರ್ವಕಾಲಿಕ ಎಂದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ.ನಿಕೇತನ, ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂವಿಧಾನದಲ್ಲಿ ಪರಿಹಾರಗಳಿವೆ. ಅಂಬೇಡ್ಕರ್ ಪ್ರತಿಪಾದಿಸಿದ 'ಎಲ್ಲರನ್ನು ಒಳಗೊಳ್ಳುವಿಕೆ'ಯ ಆಶಯವನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಅಂಬೇಡ್ಕರ್ ಕುರಿತು ನಡೆದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರೊ. ಶ್ರೀಮತಿ ಅಡಿಗ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ರಾಜೇಂದ್ರ ಕೆ. ಮಂಜುನಾಥ್ ಉಪಸ್ಥಿತರಿದ್ದರು.


ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕಿ ಆಶಾ ನಿರೂಪಿಸಿದರು.