ಲೋಕಬಂಧು ನ್ಯೂಸ್ | ಉಡುಪಿ, ಆ.27
ಅನಾಫಿಲಿಸ್, ಕ್ಯುಲೆಕ್ಸ್, ಈಡೀಸ್ ಈಜಿಪ್ಟ್ ಎಂಬ ಮೂರು ಜಾತಿಯ ಸೊಳ್ಳೆಗಳು ಮಲೇರಿಯಾ, ಡೆಂಗ್ಯೂ, ಆನೆಕಾಲು, ಚಿಕುನ್ ಗುನ್ಯಾ, ಮೆದುಳು ಜ್ವರ ಇತ್ಯಾದಿ ಕಾಯಿಲೆಗಳನ್ನು ಹರಡುತ್ತವೆ. ಈ ರೋಗಗಳ ನಿರ್ಮೂಲನೆಗೆ ಸೊಳ್ಳೆಗಳ ನಿರ್ಮೂಲನೆಯೊಂದೇ ದಾರಿಯಾಗಿದ್ದು, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಎಚ್.ನಾಯ್ಕ್ರ್ ಹೇಳಿದರು.ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಉಡುಪಿ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸೊಳ್ಳೆ ದಿನಾಚರಣೆ ಅಂಗವಾಗಿ ನಗರದ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದೇವಪ್ಪ ಪಟೆಗಾರ್ ಮಾತನಾಡಿ, ಯಾವುದೇ ಜ್ವರ ಬಂದಾಗ ತಕ್ಷಣ ಆರೋಗ್ಯ ಕೇಂದ್ರಗಳಿಗೆ ತೆರಳಿ ರಕ್ತ ಪರೀಕ್ಷೆ ಮಾಡಿಸುವುದರೊಂದಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ನೀರು ಶೇಖರಣ ತೊಟ್ಟಿಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸಿ ಭದ್ರವಾಗಿ ಮುಚ್ಚಳ ಮುಚ್ಚಿಡಬೇಕು, ಸಂಜೆ ವೇಳೆ ಕಿಟಕಿ ಬಾಗಿಲುಗಳನ್ನು ಮುಚ್ಚಬೇಕು ಎಂದರು.
ಸ್ವಯಂ ರಕ್ಷಣಾ ವಿಧಾನ, ರಾಸಾಯನಿಕ ವಿಧಾನ, ಜೈವಿಕ ವಿಧಾನದ ಬಗ್ಗೆ ಮುಂಜಾಗ್ರತಾ ಕ್ರಮವನ್ನು ತಿಳಿಸಿದರು.
ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆರೋಗ್ಯ ಮೇಲ್ವಿಚಾರಣಾಧಿಕಾರಿ ಪಿ.ಎಂ.ಇಟಗಿ, ಪ್ರಾಧ್ಯಾಪಕರಾದ ಅನುಪಮಾ ಐ. ಮತ್ತು ಡಾ.ರಂಜನಾ ಪಾಟೀಲ್ ಮೊದಲಾದವರಿದ್ದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ನಿರೂಪಿಸಿ, ವಂದಿಸಿದರು.
