ಅಧಿಕ ಬಡ್ಡಿಗೆ ಸಾಲ ನೀಡಿ ಕಿರುಕುಳ: ಮೂವರ ಬಂಧನ

ಲೋಕಬಂಧು ನ್ಯೂಸ್ ಬ್ರಹ್ಮಾವರ, ಆ.13
ಅಧಿಕ ಬಡ್ಡಿ ದರದಲ್ಲಿ ಸಾಲ ನೀಡಿ, ಕಂತಿನ ಹಣ ಬಾಕಿ ಸಂದರ್ಭದಲ್ಲಿ ಲೇವಾದೇವಿಗಾರರಿಗೆ ಕಿರುಕುಳ ನೀಡಿದ ಆರೋಪದಡಿ ಸಾನಿಧ್ಯ ಫೈನಾನ್ಸ್‌ನ ಮೂವರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.ಕುಂಜಾಲು ಪರಿಸರದಲ್ಲಿ ಅಧಿಕ ಬಡ್ಡಿ ದರದಲ್ಲಿ ಸಾಲ ನೀಡಿ, ಸಾಲದ ಕಂತಿನ ಹಣ ಬಾಕಿ ಸಂದರ್ಭದಲ್ಲಿ ಹಣಕ್ಕಾಗಿ ಪೀಡಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಕುಂಜಾಲಿನ ಗಣೇಶ್ ಗಾಣಿಗ ಎಂಬವರ‌ ಕೆಎ-03 ಎಚ್ಎಫ್ 8253 ನೋಂದಣಿ ಸಂಖ್ಯೆಯ ಮೋಟಾರು ಸೈಕಲ್‌ನ್ನು ಬಲವಂತವಾಗಿ ತೆಗೆದುಕೊಂಡು ಹೋಗಿ, ಜಾಮೀನುದಾರ ರಾಜೇಶ್ ನಾಯ್ಕ್ ಎಂಬವರಿಗೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ರಾಜೇಶ್ ನಾಯ್ಕ್ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಾದ‌ ಮಂಗಳೂರು‌ ಕುಳಾಯಿಯ ಸಂದೀಪ್ ಶೆಟ್ಟಿ ಮತ್ತು ವಿಜಿತ್ ಶೆಟ್ಟಿ ಕಾವೂರು ಎಂಬವರನ್ನು ಆ.6ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮತ್ತೋರ್ವ ಆರೋಪಿ ಬಜ್ಪೆ ಮಳವೂರಿನ ಸಂಪತ್ ಎಂಬಾತನನ್ನು ಆ.13ರಂದು ಗುರುವಾರ ಬಂಧಿಸಲಾಗಿದೆ.


ಆರೋಪಿಗಳು ಬಲವಂತವಾಗಿ ತೆಗೆದುಕೊಂಡು ಹೋಗಿದ್ದ ಮೋಟಾರು ಸೈಕಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಹಾಗೂ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಅಶೋಕ ಮಾಳಾಬಗಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕಿರಣ್ ಮತ್ತು ಸಿದ್ದಪ್ಪ ಸಕೆನಳ್ಳಿ ಕಾರ್ಯಾಚರಣೆ ನಡೆಸಿದ್ದಾರೆ.