ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಕಾಣೆಯಾಗಿದೆ!

ಲೋಕಬಂಧು ನ್ಯೂಸ್ | ಬೆಂಗಳೂರು, ಆ.12
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಬಗ್ಗೆ ನಟ ಪ್ರಕಾಶ್ ರಾಜ್ ಅಸಮಾಧಾನ ವ್ಯಕ್ತಪಡಿಸಿದ್ದು, ಬೆಂಗಳೂರಿನಲ್ಲಿ ತಾನು ಹೊಂದಿದ್ದ ಮತದಾರರ ಗುರುತಿನ ಚೀಟಿ ಹಾಗೂ ಮತದಾರರ ಪಟ್ಟಿಯಲ್ಲಿ ತನ್ನ ಹೆಸರಿನ ಸ್ಥಿತಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪ್ರಕಾಶ್ ರಾಜ್, ತನ್ನ ಹುಟ್ಟೂರು ಹಾಗೂ ತನ್ನ ಜೀವನದ ಬಹುಪಾಲನ್ನು ಕಳೆದ ಬೆಂಗಳೂರಿನ ಕ್ಷೇತ್ರದಿಂದಲೇ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ.


ಈ ಕ್ರಮದ ಬಗ್ಗೆ ಅವರು ಚುನಾವಣಾ ವ್ಯವಸ್ಥೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು 'ನಾನು ಹುಟ್ಟಿ, ಬೆಳೆದ ಕ್ಷೇತ್ರದಿಂದಲೇ ನನ್ನ ಮತವನ್ನು ತೆಗೆದುಹಾಕಲಾಗಿದೆ. ಇಲ್ಲೇ ಶಾಲೆ, ಕಾಲೇಜು, ನಟನಾ ಶಾಲೆಗಳಲ್ಲಿ ಓದಿದ್ದೇನೆ. ನನ್ನ ಸಿನಿಮಾ ಜೀವನದ ಆರಂಭಿಕ ದಿನಗಳನ್ನೂ ಇದೇ ನಗರದಲ್ಲಿ ಕಳೆದಿದ್ದೇನೆ. ಇದೇ ಕ್ಷೇತ್ರದಿಂದ ನಾನು ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಆದರೂ ಈಗ ಮತದಾರರ ಪಟ್ಟಿಯಲ್ಲಿ ನನ್ನ ಹೆಸರಿಲ್ಲ’ ಎಂದವರು ವೀಡಿಯೊದಲ್ಲಿ ಆರೋಪಿಸಿದ್ದಾರೆ.