ಲೋಕಬಂಧು ನ್ಯೂಸ್ ಉಡುಪಿ, ಆ.13
ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರ ಧ್ವಜಕ್ಕಾಗುವ ಅಪಮಾನವನ್ನು ತಡೆಗಟ್ಟಲು ಹಾಗೂ ರಾಷ್ಟ್ರಧ್ವಜಗಳ ಮಾರಾಟ ನಿಷೇಧಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉಡುಪಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಎಲ್ಲಾ ತಾಲೂಕುಗಳ ತಹಶೀಲ್ದಾರರಿಗೆ ಮನವಿ ನೀಡಲಾಯಿತು.ರಾಷ್ಟ್ರಧ್ವಜ ರಾಷ್ಟ್ರದ ಭಾವೈಕ್ಯತೆಯ ಸಂಕೇತವಾಗಿದೆ. ಆಗಸ್ಟ್ 15 ಮತ್ತು ಜನವರಿ 26ರಂದು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತೇವೆ. ಆದರೆ, ಅದೇ ದಿನ ಸಣ್ಣ ಸಣ್ಣ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳು ಕಸ ಮತ್ತು ಚರಂಡಿಗಳಲ್ಲಿ ಕಾಣಸಿಗುತ್ತವೆ. ಅನೇಕ ದಿನಗಳ ವರೆಗೆ ಅಂಥ ರಾಷ್ಟ್ರಧ್ವಜಗಳ ಅವಮಾನವನ್ನು ನೋಡಬೇಕಾಗುತ್ತದೆ.
ಪ್ಲಾಸ್ಟಿಕ್ ಧ್ವಜಗಳು ಬೇಗನೆ ನಾಶವಾಗದ ಕಾರಣ ಪರಿಸರಕ್ಕೂ ಹಾನಿಯಾಗುತ್ತದೆ. ಪ್ಲಾಸ್ಟಿಕ್ ರಾಷ್ಟ್ರಧ್ವಜದ ತಯಾರಿ ಹಾಗೂ ಮಾರಾಟ ತಡೆಯವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ವಿದ್ಯಾರ್ಥಿಗಳಿಂದ ರಾಷ್ಟ್ರಧ್ವಜದ ಅಪಮಾನ ಅಥವಾ ಅನಾದರದ ಕೃತ್ಯಗಳು ನಡೆಯದಂತೆ ಜಿಲ್ಲಾ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ 25ಕ್ಕೂ ಅಧಿಕ ಶಾಲಾ-ಕಾಲೇಜುಗಳಿಗೆ ಮನವಿ ನೀಡಲಾಯಿತು.
ಪ್ಲಾಸ್ಟಿಕ್ ಬಳಸಿ ರಾಷ್ಟ್ರಧ್ವಜದ ಅಪಮಾನವನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅದರಂತೆ ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿವೆ. ಹಾಗಾಗಿ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳ ಮಾರಾಟ ಸಂವಿಧಾನಬಾಹಿರವಾಗಿದೆ.
ಭಾವಿ ಪೀಳಿಗೆ ರಾಷ್ಟ್ರಾಭಿಮಾನಿಗಳಾಗಲಿ ಎಂಬ ಉದ್ದೇಶದಿಂದ ಸಮಿತಿ ಕಳೆದ 23 ವರ್ಷಗಳಿಂದ 'ರಾಷ್ಟ್ರಧ್ವಜವನ್ನು ಗೌರವಿಸಿ' ಎಂಬ ಉಪಕ್ರಮ ಜಾರಿಗೊಳಿಸುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕಾರ ಚಂದ್ರ ಮೊಗವೀರ ತಿಳಿಸಿದ್ದಾರೆ.