ಲೋಕಬಂಧು ನ್ಯೂಸ್ ಉಡುಪಿ, ಆ.24
ಸತತ 25 ಗಂಟೆಗಳ ಕಾಲ ನಿರಂತರವಾಗಿ ದಾಸರ ಪದಗಳನ್ನು ಹಾಡುವ ಮೂಲಕ ವಿದುಷಿ ಸಂಗೀತ ಬಾಲಚಂದ್ರ ಅವರು ವಿಶ್ವದಾಖಲೆ ನಿರ್ಮಿಸಿದ್ದಾರೆ.ಭಾನುವಾರ ಬೆಳಿಗ್ಗೆ 6.30ಕ್ಕೆ ಪುತ್ತಿಗೆ ಮಠದ ಗೀತಾ ಮಂದಿರದ ಶ್ರೀ ಪುತ್ತಿಗೆ ನೃಸಿಂಹ ಸಭಾಂಗಣದಲ್ಲಿ ಆರಂಭಗೊಂಡ ಸಂಗೀತ ಬಾಲಚಂದ್ರ ಅವರ ನಿರಂತರ ಗಾಯನ ಸೋಮವಾರ ಬೆಳಿಗ್ಗೆ 7.40ಕ್ಕೆ ಮುಕ್ತಾಯವಾಯಿತು.
ಕೇವಲ ದಾಸರ ಪದಗಳು ಮತ್ತು ಕೀರ್ತನೆಗಳ ಮೂಲಕ ಸತತ 25 ಗಂಟೆಗಳ ಕಾಲ ಹರಿನಾಮ ಸ್ಮರಣೆ ನಡೆಸಿರುವುದು ಈ ಸಾಧನೆಯ ವಿಶೇಷತೆ. ಪಕ್ಕವಾದ್ಯ ಕಲಾವಿದರ ಸಹಕಾರದೊಂದಿಗೆ ಒಂದರ ಹಿಂದೆ ಒಂದರಂತೆ ದಾಸ ಕೀರ್ತನೆಗಳನ್ನು ಪ್ರಸ್ತುತಪಡಿಸಿದ ಸಂಗೀತ ಬಾಲಚಂದ್ರ ವಿಶ್ವ ದಾಖಲೆಗೆ ಪಾತ್ರರಾದರು.
ಅದನ್ನು ಅಧಿಕೃತವಾಗಿ ದೃಢೀಕರಿಸಲು ಆಗಮಿಸಿದ್ದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಏಷ್ಯಾ ಹೆಡ್ ಡಾ.ಮನೀಷ್ ವಿಶ್ನೋಯಿ ಅವರು ವಿಶ್ವ ದಾಖಲೆಯನ್ನು ಘೋಷಿಸಿ ಪ್ರಮಾಣಪತ್ರ ನೀಡಿದರು.
ಇದೇ ಸಂದರ್ಭದಲ್ಲಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ವಿದುಷಿ ಸಂಗೀತ ಬಾಲಚಂದ್ರ ಅವರಿಗೆ ಮುಂಬೈಯಲ್ಲಿ ಚಾತುರ್ಮಾಸ್ಯ ನಿರತರಾಗಿರುವ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸೂಚನೆಯ ‘ಗೀತಾ ಗಂಗೋತ್ರಿ’ ಉಪಾದಿ ನೀಡಿ ಹರಸಿದರು.
ಬಳಿಕ ಆಶೀರ್ವಚನ ನೀಡಿದ ಶ್ರೀಪಾದರು ವಿಶ್ವಪ್ರಿಯತೀರ್ಥ ಶ್ರೀಪಾದರು ಗೀತಾ, ಗಂಗೆ, ಗೋವಿಂದ ಮತ್ತು ಗೋವು ಇವುಗಳ ಪವಿತ್ರ ಸ್ಮರಣೆ ಈ ಬಿರುದಿನಲ್ಲಿ ಅಡಕವಾಗಿದೆ. ಗಂಗೋತ್ರಿಯಿಂದ ಗಂಗೆ ನಿರಂತರವಾಗಿ ಪ್ರವಹಿಸುವಂತೆ ಸಂಗೀತ ಬಾಲಚಂದ್ರ ಅವರ ಕಂಠದಿಂದ ದಾಸ ಸಾಹಿತ್ಯ ಮತ್ತು ಭಕ್ತಿ ಸಂಗೀತದ ಗಂಗೆ ನಿರಂತರವಾಗಿ ಹರಿದು ಜನರಲ್ಲಿ ಭಕ್ತಿ ಮತ್ತು ಭಾವವನ್ನು ಜಾಗೃತಗೊಳಿಸಲಿ ಎಂದು ಹಾರೈಸಿದರು.
ನಿರಂತರ ಗಾಯನಕ್ಕೆ ಪಕ್ಕವಾದ್ಯದಲ್ಲಿ ಕೀಬೋರ್ಡ್‌ನಲ್ಲಿ ಗುರುರಾಜ್, ಮೊಗಿ ಗುರುರಾಜ್ ಮತ್ತು ರಜ್ಯಾ ಕರಿವೆಲ್ಲೂರ್, ರಿದಮ್ ಪ್ಯಾಡ್‌ನಲ್ಲಿ ಪ್ರಭಾಕರ ಅಮ್ಮಿಂಗೋಡ್ ಮತ್ತು ಶ್ರೀ ವಾಮನ ಕೆ., ತಬಲಾದಲ್ಲಿ ದೀಕ್ಷಿತ್ ಕೊಡಂಚ ಮತ್ತು ದೀಪಕ್ ರಾಜ್ ಉಲ್ಲಾಸು, ಕೊಳಲು ವಾದನದಲ್ಲಿ ಸಂತೋಷ್ ವಿಠಲ್ ಸಹಕರಿಸಿದರು.
ಈ ಸಂದರ್ಭದಲ್ಲಿ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸಂಗೀತ ಅವರ ತಾಯಿ- ತಂದೆಯರಾದ ಗೀತಾ ಪುರಾಣಿಕ ಹಾಗೂ ವೇದವ್ಯಾಸ ಪುರಾಣಿಕ, ವಿಜಯಾ ನಾಗರಾಜ ಆಚಾರ್ಯ, ಲಕ್ಷ್ಮೀ ಪ್ರಸನ್ನ ಆಚಾರ್ಯ ಮೊದಲಾದವರಿದ್ದರು.