ಸಾಹಿತಿ ವರದರಾಜ ಬಲ್ಲಾಳ ನಿಧನ

ಲೋಕಬಂಧು ನ್ಯೂಸ್ ಉಡುಪಿ, ಆ.13
ಸಾಹಿತಿ, ಚಿಂತಕ ವಿದ್ವಾನ್ ವರದರಾಜ ಬಲ್ಲಾಳ ಅವರು ಕಿದಿಯೂರಿನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು.ಇಲ್ಲಿನ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಿನಿ ಸಂಸ್ಕೃತ ಮಹಾಪಾಠಶಾಲೆಯಲ್ಲಿ10 ವರ್ಷ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು, ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ 37 ವರ್ಷ ಕಾಲ ಹಿಂದಿ ಭಾಷಾ ಪ್ರಾಧ್ಯಾಪಕರಾಗಿ‌ ನಿವೃತ್ತರಾಗಿದ್ದರು.


ಅವರ ಬರೆಹಗಳು ಸುಗುಣಮಾಲಾ, ಸಾಕ್ಷಿ, ಚಿಂತನ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು.


ಪ್ರೊ.ಜಿಡ್ಡು ಕೃಷ್ಣಮೂರ್ತಿ ಅವರ ಬರೆಹ ಹಾಗೂ 'ಯೋಗಾವಾಸಿಷ್ಠ' ಕುರಿತ ಅವರ ಉಪನ್ಯಾಸಗಳು ಅನೇಕ ಬಾರಿ ಆಕಾಶವಾಣಿಯಲ್ಲಿ ಬಿತ್ತರವಾಗಿದೆ. 90ರ ದಶಕದಲ್ಲಿ ಬೆಂಗಳೂರಿನ ರಾಮಕೃಷ್ಣ ಆಶ್ರಮದಲ್ಲಿ ಒಂದು ವಾರ ಕಾಲ ಉಪನ್ಯಾಸವೂ ನಡೆದಿತ್ತು.


ಮುಂಬೈಯ ಘನಶ್ಯಾಮದಾಸ
ಬಿರ್ಲಾ ಬರೆದ ಪ್ರಸಿದ್ಧ ಹಿಂದಿ ಕೃತಿ 'ಕೃಷ್ಣಂ ವಂದೇ ಜಗದ್ಗುರುಮ್' ಕೃತಿಯನ್ನು ಬಲ್ಲಾಳ ಅವರು ಹಿಂದಿ ಭಾಷೆಯಿಂದ ಕನ್ನಡಕ್ಕೆ ಭಾಷಾಂತರಿಸಿದ್ದರು. ಈ ಕೃತಿ ಸುಗುಣಮಾಲಾ ಮಾಸಿಕದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು. ಅದನ್ನು ಗೋಕುಲದಾಸ ಪೈ ಕೃತಿ ರೂಪದಲ್ಲಿ ಪ್ರಕಟಿಸಿ ಅನೇಕ ಭಕ್ತರಿಗೆ ಉಚಿತವಾಗಿ ವಿತರಿಸಿದ್ದರು.


1994ರಲ್ಲಿ ಶೀರೂರು ಮಠಾಧೀಶ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥರು ತಮ್ಮ ದ್ವಿತೀಯ ಪರ್ಯಾಯ ಅವಧಿಯಲ್ಲಿ ವರದರಾಜ ಬಲ್ಲಾಳರ ಉಪನ್ಯಾಸ ಆಯೋಜಿಸಿ, ಅಭಿನಂದಿಸಿದ್ದರು.


ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಸಹಪಾಠಿಯಾಗಿದ್ದ ಬಲ್ಲಾಳ ಅವರನ್ನು ವಿಶೇಷವಾಗಿ ಗೌರವಿಸಿದ್ದರು. ಸುಗುಣಮಾಲಾ ಪತ್ರಿಕೆಯಲ್ಲಿನ ಸೇವೆಗಾಗಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರೂ ಗೌರವಿಸಿದ್ದರು. ಇತ್ತೀಚೆಗೆ ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥರು ಬಲ್ಲಾಳರ ಮನೆಗೇ ಆಗಮಿಸಿ ಅಭಿನಂದಿಸಿದ್ದರು.


ವರದರಾಜ ಬಲ್ಲಾಳ ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.