ಲೋಕಬಂಧು ನ್ಯೂಸ್ ಕಾಪು, ಸೆ.22
ಶಕ್ತಿ ಸ್ವರೂಪಿಣಿ ಕಾಪುವಿನ ಅಮ್ಮನ ಪವಿತ್ರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಮತ್ತು ಸಕಲ ಭಕ್ತರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಸಂಕಲ್ಪದೊಂದಿಗೆ ಮಾತೃಕಾ ಶಕ್ತಿ ಪೂಜೆ ಎಂಬ ವಿಶಿಷ್ಟ ಧಾರ್ಮಿಕ ಕಾರ್ಯಕ್ರಮ ಸೆಪ್ಟೆಂಬರ್ 24ರಂದು ಅಪರಾಹ್ನ 3ರಿಂದ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ತಿಳಿಸಿದ್ದಾರೆ.ದೇವಳದ ಪ್ರಧಾನ ತಂತ್ರಿ ಕೆ.ಪಿ.ಕುಮಾರಗುರು ತಂತ್ರಿ ಮಾರ್ಗದರ್ಶನ ಹಾಗೂ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಪರಾಹ್ನ 3.30ರಿಂದ ಸಾಮೂಹಿಕ ಪ್ರಾರ್ಥನೆ, 4ಕ್ಕೆ ದೀಪ ಪ್ರಜ್ವಲನೆ ನಡೆದು 4.30ಕ್ಕೆ ಸಭಾ ಕಾರ್ಯಕ್ರಮ, 5.30ಕ್ಕೆ ಮಹಾ ಮಂಗಳಾರತಿಯೊಂದಿಗೆ ಸಮಾಪನಗೊಳ್ಳಲಿದೆ ಎಂದವರು ಮಾಹಿತಿ ನೀಡಿದರು.
ಕಾಪು ಶ್ರೀ ಮಾರಿಗುಡಿ ದೇವಸ್ಥಾನ, ದೇವಸ್ಥಾನ ಅಭಿವೃದ್ಧಿ ಸಮಿತಿ ಹಾಗೂ ನವದುರ್ಗಾ ಲೇಖನ ಯಜ್ಞ ಸಮಿತಿ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಕಾಪು ಕ್ಷೇತ್ರದ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆಗಾಗಿ ಸ್ಥಾಪಿತವಾಗಿರುವ ಟ್ರಸ್ಟ್‌ನ್ನು ಸಭಾ ಕಾರ್ಯಕ್ರಮಕ್ಕೂ ಮುನ್ನ ಬೆಂಗಳೂರಿನ ಎಂ.ಆರ್.ಜಿ. ಗ್ರೂಪ್ ಚೇರ್ಮನ್ ಡಾ.ಕೆ.ಪ್ರಕಾಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ.
ಕಾಪುವಿನ ಅಮ್ಮನಿಗೊಂದು ಅಕ್ಷರ ನಮನ
ನವದುರ್ಗಾ ಲೇಖನ ಯಜ್ಞ ಸಮಿತಿ ವತಿಯಿಂದ 9 ಮಂದಿ ಗಣ್ಯರ ಸಮ್ಮುಖದಲ್ಲಿ 'ಕಾಪುವಿನ ಅಮ್ಮನಿಗೊಂದು ಅಕ್ಷರ ನಮನ' ಮಹಾಭಿಯಾನಕ್ಕೆ ಚಾಲನೆ ನೀಡಲಾಗುವುದು. ನವದುರ್ಗಾ ಲೇಖನ ಪುಸ್ತಕದಲ್ಲಿ ನವದುರ್ಗೆಯರ ನಾಮಗಳನ್ನು 9 ದಿನಗಳ ಕಾಲ ಬರೆದು, ಶಾಶ್ವತ ಸೇವೆಯೊಂದಿಗೆ ಅಮ್ಮನಿಗೆ ಸಮರ್ಪಿಸುವ ಭಕ್ತರಿಗೆ ಅಮ್ಮನ ಅನುಗ್ರಹ ಪ್ರಸಾದದೊಂದಿಗೆ ಅದೃಷ್ಟದ ಚೀಟಿ ನೀಡಲಾಗುವುದು. ಕೇವಲ 99 ದಿನಗಳ ವರೆಗೆ ಮಾತ್ರ ಅವಕಾಶವಿದ್ದು, ಅದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಅದೃಷ್ಟಶಾಲಿ ಭಕ್ತರ ಕೈಗಳಿಗೆ ಸ್ವರ್ಣ ಸೌಭಾಗ್ಯ!
ನವದುರ್ಗೆಯರ ನಾಮಗಳನ್ನು ಭಕ್ತಿಯಿಂದ ಬರೆದು ಶಾಶ್ವತ ಸೇವೆಯೊಂದಿಗೆ ಸಮರ್ಪಿಸುವ 9 ಅದೃಷ್ಟಶಾಲಿ ಭಕ್ತರಿಗೆ ಕಾಪು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅಮ್ಮನ ಪ್ರಸಾದ ರೂಪದಲ್ಲಿ ತಲಾ 9 ಗ್ರಾಂ. ತೂಕದ ಸ್ವರ್ಣ ಪದಕ ಪ್ರಾಪ್ತಿಯಾಗಲಿದೆ. ಒಬ್ಬರ ಹೆಸರಿನಲ್ಲಿ ಒಂದು ಲೇಖನದ ಪುಸ್ತಕ ಬರೆಯಲು ಮಾತ್ರ ಅವಕಾಶವಿದೆ ಎಂದು ಕೆ.ವಾಸುದೇವ ಶೆಟ್ಟಿ ತಿಳಿಸಿದರು.
ನವದುರ್ಗಾ ಲೇಖನ ಶಾಶ್ವತ ಸೇವೆ
ನವದುರ್ಗಾ ಲೇಖನ ಬರೆದ ಭಕ್ತರಿಗೆ 99,999 ರೂ.ನ ವಾಗ್ದೇವಿ ಶಾಶ್ವತ ಸೇವೆ, 9,999 ರೂ.ನ ನವಶಕ್ತಿ ಶಾಶ್ವತ ಸೇವೆ ಹಾಗೂ 999 ರೂ.ನ ಮಾತಂಗಿ ಶಾಶ್ವತ ಸೇವೆ ನೀಡಿ ಅಮ್ಮನ ಕೃಪೆಗೆ ಪಾತ್ರರಾಗಲು ಅವಕಾಶವಿದೆ.
ಮಾತೃಕಾ ಶಕ್ತಿ ಪೂಜೆ ಸಂಕಲ್ಪದಲ್ಲಿ ಭಾಗವಹಿಸುವ ಮಹಿಳೆಯರು, ಭಕ್ತರು ತಮ್ಮ ಹೆಸರನ್ನು ಮುಂಗಡವಾಗಿ ನೋಂದಾಯಿಸಬೇಕು. ಮಾಹಿತಿಗೆ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಕೆ.ವಾಸುದೇವ ಶೆಟ್ಟಿ ಮಾಹಿತಿ ನೀಡಿದರು.
ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಬಾಲಾಜಿ, ಕಾರ್ಯದರ್ಶಿ ಗೀತಾಂಜಲಿ ಸುವರ್ಣ, ಸಾವಿತ್ರಿ ಗಣೇಶ್ ಇದ್ದರು.