ಲೋಕಬಂಧು ನ್ಯೂಸ್ | ಉಡುಪಿ, ಸೆ.20
ಮಾನವ ಕೇವಲ ಸಂಸಾರಮುಖಿಯಾಗಿ ಬದುಕದೆ ಸಮಾಜಮುಖಿಯಾಗಿ ಜೀವಿಸಿ ಸಮಾಜದ ಋಣ ತೀರಿಸಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಹೇಳಿದರು.
ಕಡಿಯಾಳಿ ಮಹಿಷಮರ್ದಿನಿ ದೇವಳದ ಕಾತ್ಯಾಯಿನೀ ಮಂಟಪದ ಗುಜ್ಜಾಡಿ ನರಸಿಂಹ ನಾಯಕ್ ವೇದಿಕೆಯಲ್ಲಿ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 60ನೇ ವರ್ಷಾಚರಣೆ
ವಜ್ರಮಹೋತ್ಸವ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ಸಭೆ ಹಾಗೂ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಭಾರತ, ಜಗತ್ತಿನ ಶ್ರೇಷ್ಠ ಆಧ್ಯಾತ್ಮಿಕ ರಾಷ್ಟ್ರವಾಗಿದ್ದು, ಹಬ್ಬಗಳು ಈ ನಾಡಿನ ಅಸ್ಮಿತೆಯಾಗಿದೆ. ನಮ್ಮ ಪರಂಪರೆ ದಿವ್ಯತೆ ಮತ್ತು ಭವ್ಯತೆ ಹೊಂದಿದೆ. ದುರಿತಗಳು ಶ್ರೀರಾಮಚಂದ್ರ, ಸತ್ಯ ಹರಿಶ್ಚಂದ್ರರಂಥವರನ್ನೂ ಬಿಡಲಿಲ್ಲ. ಆದರೆ, ಭಗವಂತನ ಹಾಗೂ ವಿಘ್ನನಿವಾರಕ ಗಣೇಶನ ಅನುಗ್ರಹವಿದ್ದರೆ ಸಕಲ ಕಷ್ಟಗಳೂ ಕರಗಿಹೋಗುತ್ತವೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ನಾಗೇಶ್ ಹೆಗ್ಡೆ, ಸಮಾಜ ಸೇವೆ ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ. ಗಣೇಶೋತ್ಸವದ ಮೂಲಕವೂ ಸಮಾಜ ಸೇವೆ ಮಾಡಬಹುದು ಎನ್ನುವುದನ್ನು ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ತೋರಿಸಿಕೊಟ್ಟಿದೆ. ಇದು ಎಲ್ಲ ಸಮಿತಿಗಳಿಗೆ ಮಾದರಿ ಎಂದರು.
ಅಭ್ಯಾಗತರಾಗಿದ್ದ ಕಡಿಯಾಳಿ ಮಹಿಷಮರ್ದಿನಿ ದೇವಳದ ಆಡಳಿತ ಸಮಿತಿ ಅಧ್ಯಕ್ಷ ವಿಜಯರಾಘವ ರಾವ್, ಗಣೇಶೋತ್ಸವ ಆಚರಣೆಗೂ ಪೊಲೀಸ್ ಅನುಮತಿ, ಕಾನೂನು ಕಟ್ಟಳೆಯ ಚೌಕಟ್ಟು ಇರಬಾರದು. ಭಾರತದಲ್ಲಿ ಹಿಂದೂಗಳ ಹಬ್ಬದ ಆಚರಣೆಗೆ ಎಲ್ಲಾ ರೀತಿಯ ಸಹಕಾರ ಲಭಿಸುವಂತಾಗಬೇಕು. ಗಣೇಶನ ಹೆಸರಿನಲ್ಲಿ ಎಲ್ಲಾ ಹಿಂದೂ ಸಂಘಟನೆಗಳು ಒಂದಾಗಬೇಕು ಎಂದರು.
ಸಮಿತಿಯ ಗೌರವಾಧ್ಯಕ್ಷ, ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ವಾರಗಳ ಕಾಲ ಯಶಸ್ವಿಯಾಗಿ ಗಣೇಶೋತ್ಸವ ಆಯೋಜಿಸಿದ ಸಮಿತಿಯ ಎಲ್ಲ ಪದಾಧಿಕಾರಿಗಳು ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡ ಎಲ್ಲಾ ಭಗವದ್ಭಕ್ತರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಅವಕಾಶ ವಂಚಿತರಿಗೆ ನೆರವು
ಕೊರೊನಾ ಸಂದರ್ಭದಲ್ಲಿ ತಂದೆ- ತಾಯಿಗಳಿಬ್ಬರನ್ನೂ ಕಳೆದುಕೊಂಡು ತಬ್ಬಲಿಗಳಾದ ಮಕ್ಕಳನ್ನು ದತ್ತು ಪಡೆದು ಅವರ ಸಂಪೂರ್ಣ ಶಿಕ್ಷಣಕ್ಕೆ ಸಹಕರಿಸುತ್ತಿರುವ ಆಸರೆ ಚಾರಿಟೆಬಲ್ ಟ್ರಸ್ಟ್ ವತಿಯಿಂದ 25 ಮಂದಿ ವಿದ್ಯಾರ್ಥಿಗಳಿಗೆ ಧನಸಹಾಯ ವಿತರಿಸಲಾಯಿತು.
ಸಮಿತಿ ಅಧ್ಯಕ್ಷ ಪ.ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದರು. ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಕಟ್ಟೆ ರವಿರಾಜ್ ಆಚಾರ್ಯ, ಮತ್ಸ್ಯೋದ್ಯಮಿ ಆನಂದ ಸುವರ್ಣ ಮಲ್ಪೆ, ಆಭರಣ ಜ್ಯುವೆಲ್ಲರ್ಸ್ ಬೆಂಗಳೂರಿನ ಆಡಳಿತ ನಿರ್ದೇಶಕ ಡಾ.ಪ್ರತಾಪ್ ಮಧುಕರ್ ಕಾಮತ್, ವಜ್ರಮಹೋತ್ಸವ ಸಮಿತಿ ಕೋಶಾಧಿಕಾರಿ ಕೆ.ಮಂಜುನಾಥ ಹೆಬ್ಬಾರ್, ಆಸರೆ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಎಂ.ವಲ್ಲಭ ಭಟ್ ಉಪಸ್ಥಿತರಿದ್ದರು.
ಸರಿತಾ ಪ್ರಾರ್ಥಿಸಿದರು. ಸಮಿತಿಯ ಸಹಕಾರ್ಯದರ್ಶಿ ಸತೀಶ್ ಕುಲಾಲ್ ಸ್ವಾಗತಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷತಾ ನಿತಿನ್ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ 8 ಸಾವಿರಕ್ಕೂ ಅಧಿಕ ಮಂದಿ ಪ್ರಸಾದ ಭೋಜನ ಸೇವಿಸಿದರು.
.jpg)
.jpg)