ಶಾಸಕರ ತಲೆ ಕತ್ತರಿಸಿದ ರೀತಿಯಲ್ಲಿ ವೀಡಿಯೊ: ವ್ಯಕ್ತಿಯ ವಿಚಾರಣೆ

ಲೋಕಬಂಧು ನ್ಯೂಸ್ ಕಾರ್ಕಳ, ಸೆ.13
ಶಾಸಕ ವಿ. ಸುನಿಲ್ ಕುಮಾ‌ರ್ ಅವರ ತಲೆ ಕತ್ತರಿಸಿದ ರೀತಿಯಲ್ಲಿ ಚಿತ್ರವನ್ನು ಎಡಿಟ್ ಮಾಡಿ, ಪ್ರಚೋದನಕಾರಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟ ಆರೋಪದಡಿ ಪ್ರಸಾದ್ ಶೆಟ್ಟಿ ಎಂಬಾತನ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾರ್ಕಳದ ವಿಘ್ನೇಶ್ ಪ್ರಸಾದ್ ರಾವ್ ಅವರು ಸೆ.12ರಂದು ರಾತ್ರಿ 'ಪ್ರಸಾದ್ ಶೆಟ್ಟಿ' ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಶಾಸಕರ ಚಿತ್ರವನ್ನು ಎಡಿಟ್ ಮಾಡಿ, ಅವಾಚ್ಯ ಶಬ್ದಗಳು ಹಾಗೂ ಪ್ರಚೋದನಕಾರಿ ಹಿನ್ನೆಲೆಯ ಧ್ವನಿಯೊಂದಿಗೆ ವೀಡಿಯೊ ಪ್ರಕಟಿಸಿರುವುದು ಗಮನಕ್ಕೆ ಬಂದಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.


ಜನರಿಂದ ಆಯ್ಕೆಯಾದ ಶಾಸಕರನ್ನು ಕೊಲೆ ಮಾಡಬೇಕು, ಹೊಡೆಯಬೇಕು ಎಂಬ ರೀತಿಯಲ್ಲಿ ಸಾರ್ವಜನಿಕರನ್ನು ಪ್ರಚೋದಿಸುವ ಉದ್ದೇಶದಿಂದ ವೀಡಿಯೊ ಸೃಷ್ಟಿಸಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಲಾಗಿದ್ದು, ಅದರಿಂದ ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.


ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಸಾದ್‌ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.