ಲೋಕಬಂಧು ನ್ಯೂಸ್ ಉಡುಪಿ, ಸೆ.13
ನಗರದ ಮಾರುತಿ ವೀಥಿಕಾದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 26ನೇ ವರ್ಷದ ಗಣೇಶೋತ್ಸವ ಅಂಗವಾಗಿ ಮಾವಿನೆಲೆ, ವೀಳ್ಯದೆಲೆ, ಎಕ್ಕದ ಎಲೆ, ಬಾಳೆ ಎಲೆ ಮತ್ತು ಹಲಸಿನ ಎಲೆಗಳಿಂದ ಪಂಚಪತ್ರ (ಐದು ಬಗೆಯ ಎಲೆ)ಗಣಪತಿ ತಯಾರಿಸಲಾಗಿದ್ದು, ಚೌತಿಯಂದು ಪ್ರತಿಷ್ಠಾಪಿ ಪೂಜಿಸಲಾಗುವುದು.
ಕಿನ್ನಿಮೂಲ್ಕಿ ದಿ.ಸದಾಶಿವ ಆಚಾರ್ಯ ಅವರ ಪುತ್ರರಾದ ಕಾರ್ತಿಕ್ ಆಚಾರ್ಯ ಮತ್ತು ಕೌಶಿಕ್ ಆಚಾರ್ಯ ಕೈಚಳಕದಲ್ಲಿ ಮೂಡಿಬಂದ ಪಂಚ ಹಸಿರೆಲೆ ಗಣಪ ಈ ಬಾರಿ ಗುರುರಾಜ್ ಎಂ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಆಚರಿಸುತ್ತಿದೆ.
ಸೆ.14ರಂದು ಬೆಳಿಗ್ಗೆ 9.30 ಗಂಟೆಗೆ ಪ್ರಾಣಪ್ರತಿಷ್ಠೆ, 11.30ಕ್ಕೆ ಗಣಹೋಮ. ಮಹಾಪೂಜೆ, ಮಧ್ಯಾಹ್ನ 2.30ರಿಂದ ಸಂಗೀತ ಭಕ್ತಿ ರಸಮಂಜರಿ, ಸಂಜೆ 6 ಗಂಟೆಗೆ ರಂಗಪೂಜೆ ನಡೆಯಲಿದ್ದು ರಾತ್ರಿ 7.30ರಿಂದ ಮೆರವಣಿಗೆ ಹೊರಟು ಉಡುಪಿಯ ಭಾಗದಲ್ಲಿ ಸಂಚರಿಸಿ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಲಸ್ತಂಭನಗೊಳಿಸಲಾಗುವುದು ಎಂದು ಸಮಿತಿ ಕಾರ್ಯಾಧ್ಯಕ್ಷ ಗಣೇಶ್ ರಾಜ್ ಸರಳಬೆಟ್ಟು ತಿಳಿಸಿದ್ದಾರೆ.