ಲೋಕಬಂಧು ನ್ಯೂಸ್ ಉಡುಪಿ, ಸೆ.13
ಸಹಕಾರ ರಂಗದ ಪ್ರತಿಷ್ಠಿತ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಭಾನುವಾರ ನಗರದ ಪುರಭವನದಲ್ಲಿ ಸೊಸೈಟಿ ಅಧ್ಯಕ್ಷ `ಸಹಕಾರ ರತ್ನ' ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಘದ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಗತ ಆರ್ಥಿಕ ವರ್ಷದಲ್ಲಿ ಸಂಘ 22,869 ಸದಸ್ಯರನ್ನು ಹೊಂದಿದ್ದು 4.89 ಕೋಟಿ ಪಾಲು ಬಂಡವಾಳ ಹಾಗೂ .658.80 ಕೋಟಿ ರೂ. ಠೇವಣಿ ಹೊಂದಿದೆ. 533.96 ಕೋಟಿ ರೂ. ಹೊರಬಾಕಿ ಸಾಲ ಹೊಂದಿದ್ದು 4,089 ಕೋಟಿ ರೂ. ವಹಿವಾಟು ನಡೆಸಿ 15.09 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ 15 ಶೇ. ಪಾಲು ಮುನಾಫೆ (ಡಿವಿಡೆಂಡ್) ಪ್ರಕಟಿಸಲಾಗಿದೆ ಎಂದರು.
ಸತತ 2 ಬಾರಿ ರಾಷ್ಟ್ರ ಮಟ್ಟದ ಪ್ರಶಸ್ತಿ ಹಾಗೂ 9 ಬಾರಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿರುವ ಸಂಘ, 2025-26ನೇ ಸಾಲಿನ ಸರ್ವತೋಮುಖ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಸಾಧನಾ ಪ್ರಶಸ್ತಿ ಪಡೆದಿದ್ದು, ಇದು ಸತತ 20ನೇ ಬಾರಿ ಲಭಿಸುವ ಜಿಲ್ಲಾ ಪ್ರಶಸ್ತಿಯಾಗಿದೆ. ಅದೇ ರೀತಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಸಂಘಕ್ಕೆ ಸಹಕಾರ ಮಾಣಿಕ್ಯ ಪ್ರಶಸ್ತಿ ಲಭಿಸಿದ್ದು, ನಗದು ಬಹುಮಾನ ಹಾಗೂ 5 ಗ್ರಾಂ. ಬಂಗಾರದ ಪದಕ ಪಡೆದುಕೊಂಡಿದೆ.
ಉಡುಪಿ ಜಿಲ್ಲೆಯ ಮೊದಲ ಕ್ರೆಡಿಟ್ ಸಹಕಾರ ಸಂಘವಾಗಿ ಈ ಪ್ರಶಸ್ತಿಗೆ ಪಾತ್ರವಾಗಿರುವುದು ಸಂಘದ ಹೆಗ್ಗಳಿಕೆಯಾಗಿದೆ ಎಂದು ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು
ಸಾಧಕರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಫ್ಯಾಷನ್ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವ ಬಾಲಪ್ರತಿಭೆ ಸಚಿತಾ ರಾವ್, ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯ ರಾಷ್ಟ್ರೀಯ ಮಟ್ಟದಲ್ಲಿ ಉಡುಪಿಯನ್ನು ಪ್ರತಿನಿಧಿಸಿದ ಮೊದಲ ಯುವತಿ ಸ್ಫೂರ್ತಿ ಡಿ.ಶೆಟ್ಟಿ, ಸತತ 25 ಗಂಟೆಗಳ ಕಾಲ 200ಕ್ಕೂ ಅಧಿಕ ದಾಸರ ಪದಗಳನ್ನು ಪ್ರಸ್ತುತಪಡಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ ವಿದುಷಿ ಸಂಗೀತ ಬಾಲಚಂದ್ರ, ಆಹಾರೋತ್ಪನ್ನ ತಯಾರಕಿ ಸುಗುಣಾ ಪೈ ಟಿ., ಹಾಗೂ ಪವರ್ ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್'ನಲ್ಲಿ ಜಿಲ್ಲಾ, ರಾಜ್ಯ, ವಿಶ್ವವಿದ್ಯಾಲಯ ಹಾಗೂ ದಕ್ಷಿಣ ಭಾರತ ಮಟ್ಟದಲ್ಲಿ ಸಾಧನೆ ಮಾಡಿದ ಆ್ಯನ್ನಿ ಲಿಸಾ ಅಮ್ಮನ್ನ ಅವರನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಶಾಸಕ ಯಶಪಾಲ್ ಸುವರ್ಣ ಗೌರವಿಸಿದರು.
ನಿವೃತ್ತ ಪಿಗ್ಮಿ ಸಂಗ್ರಾಹಕರಾದ ಗೋವಿಂದ ದಾಸ್ ಕೆ. ಸುವರ್ಣ ಹಾಗೂ ವೆಂಕಟರಮಣ ಭಟ್ ಅವರನ್ನು ಬೀಳ್ಕೊಡಲಾಯಿತು.
ಸೊಸೈಟಿ ನಿರ್ದೇಶಕರಾದ ಸಂಜೀವ ಕಾಂಚನ್, ಎಲ್.ಉಮಾನಾಥ, ಪುರುಷೋತ್ತಮ ಪಿ. ಶೆಟ್ಟಿ, ಸಯ್ಯದ್ ಅಬ್ದುಲ್ ರಜಾಕ್, ವಿನಯ ಕುಮಾರ್ ಟಿ.ಎ., ಪದ್ಮನಾಭ ಕೆ.ನಾಯಕ್, ಸದಾಶಿವ ನಾಯ್ಕ್, ಮನೋಹರ್ ಎಸ್ ಶೆಟ್ಟಿ, ಸಾಧು ಸಾಲ್ಯಾನ್, ಜಯಾ ಶೆಟ್ಟಿ, ಗಾಯತ್ರ್ರಿ ಎಸ್. ಭಟ್ ಉಪಸ್ಥಿತರಿದ್ದರು.
ಮಲ್ಪೆ ಶಾಖಾ ವ್ಯವಸ್ಥಾಪಕ ನವೀನ್ ಕೆ. ಸನ್ಮಾನ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ವಂದಿಸಿದರು.