ಕಲಾವಿದ ಎಂ.ಟಿ.ಎಸ್. ಕುಲಾಲ್ ನಿಧನ

ಲೋಕಬಂಧು ನ್ಯೂಸ್ | ಉಡುಪಿ, ಸೆ.15
ತೆಂಕು ತಿಟ್ಟಿನ ಸಮರ್ಥ ಕಲಾವಿದ ಎಂ.ಟಿ.ಎಸ್ ಕುಲಾಲ್ (79) ಮಂಗಳವಾರ ನಿಧನರಾದರು.
ಅವರು ಪತ್ನಿ,  ಪುತ್ರಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.


ಸೋದರ ಮಾವ ಬೇತಕುಂಞಿ ಕುಲಾಲ್ ಅವರಲ್ಲಿ ಯಕ್ಷಗಾನ ಕಲಿತು ಧರ್ಮಸ್ಥಳ, ಮೂಲ್ಕಿ, ಸುರತ್ಕಲ್, ಕುಂಬ್ಳೆ, ಬಪ್ಪನಾಡು, ಕಟೀಲು ಮೇಳಗಳಲ್ಲಿ ಆರು ದಶಕಗಳ ಕಲಾಸೇವೆಗೈದಿದ್ದರು. ಭಾಗವತಿಕೆಯಲ್ಲೂ ಪರಿಣತಿ ಪಡೆದಿದ್ದ ಅವರು ರಾಜವೇಷ, ಪೋಷಕ ವೇಷ, ಸ್ತ್ರೀವೇಷ, ಹಾಸ್ಯ ಹೀಗೆ ಎಲ್ಲಾ ರೀತಿಯ ಪಾತ್ರಗಳನ್ನು ಪರಿಣಾಮಕಾರಿಯಾಗಿ  ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದರು.


ತನ್ನ ಇಳಿ ವಯಸ್ಸಿನಲ್ಲೂ ಮೇಳದ ಪ್ರತಿನಿಧಿಯಾಗಿ ಕಲಾರಂಗಕ್ಕೆ ಬರುತ್ತಿದ್ದರು. ಪ್ರತಿ ವರ್ಷ ಯಕ್ಷನಿಧಿ ಸಮಾವೇಶಕ್ಕೆ  ತಪ್ಪದೆ ಭಾಗವಹಿಸುತ್ತಿದ್ದರು. ತಿಂಗಳ ಹಿಂದಷ್ಟೇ ಕಟೀಲು ಮೇಳದ ಅಭಿಮಾನಿಗಳು ಅವರ ಮನೆಗೆ ತೆರಳಿ ಅವರನ್ನು ಗೌರವಿಸಿದ್ದರು.


ಉಡುಪಿ ಯಕ್ಷಗಾನ‌ ಕಲಾರಂಗ ಸಂಸ್ಥೆ ಅವರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಕಳೆದ ವರ್ಷ ಸಂಸ್ಥೆಯ 50 ಸಾವಿರ ರೂ. ನಿಧಿಯನ್ನೊಳಗೊಂಡ ಸುವರ್ಣ ಪುರಸ್ಕಾರಕ್ಕೆ ಭಾಜನರಾಗಿದ್ದರು.


ಕುಲಾಲ್ ನಿಧನಕ್ಕೆ‌ ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ.ಗಂಗಾಧರ ರಾವ್,  ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.