ಯುವಜನತೆಯ ಬೌದ್ಧಿಕ ಮತ್ತು ದೈಹಿಕ ಸಾಮರ್ಥ್ಯ ಒಗ್ಗೂಡಿದಾಗ ಸದೃಢ ರಾಷ್ಟ್ರ ನಿರ್ಮಾಣ

ಲೋಕಬಂಧು ನ್ಯೂಸ್ | ಉಡುಪಿ, ಸೆ.20
ಯುವ ಜನತೆಯ ದೈಹಿಕ ಸಾಮರ್ಥ್ಯ ದೊಂದಿಗೆ ಬೌದ್ಧಿಕ ಸಾಮರ್ಥ್ಯವೂ ಜೊತೆಯಾದಾಗ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಶಾಸಕ ಯಶಪಾಲ್ ಸುವರ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ನಗರದ ಬೋರ್ಡ್ ಹೈಸ್ಕೂಲ್ ಸಭಾಂಗಣದಲ್ಲಿ ಭಾನುವಾರ ವಿದ್ಯಾರ್ಥಿಗಳಿಗಾಗಿ ನಡೆದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದರು.
13 ವರ್ಷ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ, 2014ರಲ್ಲಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಭಾರತವನ್ನು ಜಗತ್ತೇ ತಿರುಗಿ ನೋಡುವಂತೆ ಮಾಡಿದ್ದಾರೆ. ಅವರ ಚಿಂತನೆ, ಸಂಕಲ್ಪ ಹಾಗೂ ಕಾರ್ಯಕ್ಷಮತೆ ಯುವಜನತೆಗೆ ಸ್ಫೂರ್ತಿಯಾಗಿವೆ.


ಪ್ರಧಾನಿ ಕಾರ್ಯಗಳಿಗೆ ಮತ್ತಷ್ಟು ಶಕ್ತಿ ತುಂಬುವ ಹಾಗೂ ಅವರ ವಿಚಾರಧಾರೆಗಳನ್ನು ಯುವಜನತೆಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರುಡಾಲ್ಫ್ ಮತ್ತು ಡೆನ್ನಿಸ್ ನೇತೃತ್ವದ ತಂಡ ಪರಿಶ್ರಮ ವಹಿಸಿ ಪ್ರಧಾನಿ ಮೋದಿ ಅವರಿಗೆ ಶಕ್ತಿ ತುಂಬುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.


ಕ್ರೀಡಾ ಚಟುವಟಿಕೆಗಳು ಸಾಮಾನ್ಯವಾಗಿ ದೈಹಿಕ ಸಾಮರ್ಥ್ಯ ಪ್ರದರ್ಶಿಸುವುದಾದರೆ, ಚೆಸ್ ಬೌದ್ಧಿಕ ಸಾಮರ್ಥ್ಯ ಬೆಳೆಸುವ ಕ್ರೀಡೆ. ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಯುವ ಪ್ರತಿಭೆಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಜಿಲ್ಲೆಯ ಗೌರವ ಹೆಚ್ಚಿಸಲಿ ಎಂದು ಶುಭ ಹಾರೈಸಿದರು.


ಶಾಸಕ ಯಶಪಾಲ್ ಸುವರ್ಣ ಹಾಗೂ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಚೆಸ್ ಆಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.


ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ಭಾರತೀಯ ಜನತಾ ಪಾರ್ಟಿ ಕೇವಲ ಚುನಾವಣೆಗೆ ಸೀಮಿತವಾಗದೆ ಸಾಮಾಜಿಕ ಹಾಗೂ ಸೇವಾ ಚಟುವಟಿಕೆಗಳಲ್ಲಿಯೂ ತೊಡಗಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಅರ್ಥಪೂರ್ಣಗೊಳಿಸುವ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಚೆಸ್ ಪಂದ್ಯಾಟ ಆಯೋಜಿಸಲಾಗಿದೆ. ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ಇಂಥ ಕಾರ್ಯಕ್ರಮಗಳ ಆಯೋಜನೆ ಶ್ಲಾಘನೀಯ ಎಂದರು.


ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ಚೆಸ್ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ಕ್ರೀಡಾ ಚಟುವಟಿಕೆಯಾಗಿದ್ದು, ಅದು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೂ ಸಹಕಾರಿಯಾಗಲಿದೆ ಎಂದರು.


ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಫ್ ಡಿ'ಸೋಜಾ, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಡೆನಿಸ್ ಮಸ್ಕರೇಞಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಕ್ ಆಸಿಫ್, ಜಿಲ್ಲಾ ಉಪಾಧ್ಯಕ್ಷ ಮೈಕೆಲ್ ಡಿ'ಸೋಜಾ, ಕಾರ್ಯದರ್ಶಿ ಅನಿತಾ ಬೆಲಿಂಡ ಡಿ'ಸೋಜಾ, ಅನಿಲ್ ಅಂಬಲಪಾಡಿ, ಕೋಶಾಧಿಕಾರಿ ಗ್ಲೆನ್ ಮೋನಿಸ್, ಸಲೀಮ್ ಅಂಬಾಗಿಲು ಮೊದಲಾದವರಿದ್ದರು. ನವೀನ್ ಡಿ'ಸೋಜಾ ನಿರೂಪಿಸಿದರು.


ಚೆಸ್ ಸ್ಪರ್ಧೆಯಲ್ಲಿ ಒಟ್ಟು 163 ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.


ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಸಾಮರ್ಥ್ಯ ಹಾಗೂ ಕ್ರೀಡಾಸಕ್ತಿ ಉತ್ತೇಜಿಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿತ್ತು.