ಲೋಕಬಂಧು ನ್ಯೂಸ್ ಉಡುಪಿ, ಸೆ.11
ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟ (ಯುಎಫ್‌ಬಿಯು)ದ ನೇತೃತ್ವದ ಅಖಿಲ ಭಾರತ ಬ್ಯಾಂಕ್ ಮುಷ್ಕರದ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಕೋರ್ಟ್ ರಸ್ತೆಯ ಕೆನರಾ ಬ್ಯಾಂಕಿನ ಎದುರು ಧರಣಿ ನಡೆಸಲಾಯಿತು.ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೂಡಲೇ ಜಾರಿಗೊಳಿಸಬೇಕು. ಎಲ್ಲಾ ಬ್ಯಾಂಕ್‌ಗಳ ನೌಕರರ ನಡುವೆ ಏಕರೂಪದ ಹುದ್ದೆ ಮತ್ತು ಶ್ರೇಣಿಗೆ ಸಮಾನವಾದ ಕಾರ್ಯಕ್ಷಮತೆ ಆಧರಿತ ಪ್ರೋತ್ಸಾಹಕ ಧನ ಒದಗಿಸಬೇಕು. ಜೊತೆಗೆ ಬಾಕಿ ಉಳಿದಿರುವ ಎಲ್ಲಾ ಭರವಸೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟದ ಜಿಲ್ಲಾ ಸಂಚಾಲಕ ನಾಗೇಶ್ ನಾಯಕ್ ಮಾತನಾಡಿ, ಕೆಲಸದ ಒತ್ತಡ ತಾಳಲಾರದೆ ನೌಕರರು ಆತ್ಮಹತ್ಯೆಯಂಥ ಕಠಿಣ ಹಾದಿ ಹಿಡಿಯುತ್ತಿರುವುದು ಬೇಸರದ ಸಂಗತಿ. ಬ್ಯಾಂಕ್ ನೌಕರರ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳುವವರೇ ಇಲ್ಲದಂತಾಗಿದೆ. ತೀವ್ರ ಒತ್ತಡದ ನಡುವೆಯೇ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬ್ಯಾಂಕಿನ ಮೊದಲ ಸಾಲಿನಲ್ಲಿರುವ ನೌಕರರು ಮತ್ತು ಅಧಿಕಾರಿಗಳು ನಿತ್ಯ ಗ್ರಾಹಕರಿಗೆ ಸೇವೆ ನೀಡುತ್ತಾರೆ. ಆದರೆ, ಮೇಲಧಿಕಾರಿಗಳು ಎಸಿ ಕೊಠಡಿಗಳಲ್ಲಿ ಕುಳಿತುಕೊಂಡು ಯಾವುದೇ ಕೆಲಸ ಮಾಡುತ್ತಿಲ್ಲ. ಯಾವುದೇ ಕೆಲಸ ಮಾಡದವರಿಗೆ ಪಿಎಲ್‌ಐ ಹೆಸರಿನಲ್ಲಿ ದೊಡ್ಡ ಮೊತ್ತದ ಪ್ರೋತ್ಸಾಹಧನ ನೀಡಲಾಗುತ್ತಿದೆ. ಆದರೆ, ನಿತ್ಯ ಗ್ರಾಹಕರ ಸೇವೆಯಲ್ಲಿ ತೊಡಗಿರುವ ನೌಕರರಿಗೆ ಅನ್ಯಾಯ ಮಾಡಲಾಗುತ್ತಿದೆ. ಸರಕಾರ 'ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ' ಎಂಬ ರೀತಿಯಲ್ಲಿ ವರ್ತಿಸುತ್ತಿದೆ. ಈ ತಾರತಮ್ಯ ನೀತಿಯ ವಿರುದ್ಧ ಹೋರಾಡುವುದು ಅನಿವಾರ್ಯವಾಗಿದೆ ಎಂದರು.
ಧರಣಿಯಲ್ಲಿ ಎಐಬಿಇಎಯ ಹರೀಶ್ ಶೆಟ್ಟಿ, ಎಐಬಿಓಸಿಯ ಸಚಿನ್ ಶೆಟ್ಟಿ, ಎನ್‌ಸಿಬಿಇಯ ಮುರಳೀಧರ ಮತ್ತು ಸುಪ್ರಿಯಾ, ಎಐಓಬಿಎಯ ರವಿ ಶಂಕರ್, ಐಎನ್‌ಬಿಓಸಿಯ ಪ್ರಮೋದ್ ಲಾಂಜೆ, ಮುಖಂಡರಾದ ಸುದೀಪ, ಮನೋಜ್ ಕುಮಾರ್, ರಮೇಶ್ ನಿರಂಜನ್, ಮರಿಯೋ ಮಥಾಯಿಸ್, ಪ್ರಣವ್ ಪೈ, ಸಂತೋಷ್, ಮಂಜುನಾಥ್, ಸಚಿನ್ ಚಾಪರ್, ಸೂರಜ್ ಮೊದಲಾದವರಿದ್ದರು.ಮಣಿಪಾಲ ಪ್ರಾದೇಶಿಕ ಕಚೇರಿ ಎದುರು ಕೂಡಾ ಪ್ರತಿಭಟನೆ ನಡೆಸಲಾಯಿತು.